

ಮಂಡ್ಯ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳಿ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ದೈಹಿಕ ಶಿಕ್ಷಣ ನಿವೃತ್ತ ಶಿಕ್ಷಕಿ ಬಿ.ವಿ.ಸಾವಿತ್ರಿ ಕಿವಿಮಾತು ಹೇಳಿದರು.
ತಾಲೂಕಿನ ಗೊರವಾಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಇಂದಿನ ಕಾಲದ ಮಕ್ಕಳು ಬರೀ ಮೊಬೈಲ್ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಜ್ಞಾಪಕ ಶಕ್ತಿ ಕುಂಠಿತವಾಗುವುದಲ್ಲದೆ ಹಲವಾರು ರೋಗ ರುಜಿನಗಳಿಗೆ ಕಾರಣವಾಗುತ್ತದೆ. ಅದೇ ಕ್ರೀಡೆಯಲ್ಲಿ ಭಾಗವಹಿಸಿದರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವುದರ ಜತೆಗೆ ಈ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಿದಂತಾಗುತ್ತದೆ ಎಂದರು.
ಸಾಮಾನ್ಯ ಶಿಕ್ಷಣ ಹಾಗೂ ದೈಹಿಕ ಶಿಕ್ಷಣ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡಿಕೊಂಡರೆ, ಸಂಪಾದನೆ ಮಾಡಿದ ಹಣವನ್ನು ಆರೋಗ್ಯಕ್ಕಾಗಿಯೇ ಖರ್ಚು ಮಾಡಬೇಕಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯವಂತರಾಗಿ ಎಂದು ಹಾರೈಸಿದರು.
ಶಿಕ್ಷಕರಾದ ಮುತ್ಯಾಲಪ್ಪ, ರಾಮ ಸಂಜೀವಯ್ಯ, ಕಿರಣ್‌ಕುಮಾರ್, ನಳಿನಾ, ರಂಜು, ಶಂಕರ್ ಇತರರಿದ್ದರು.