

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ವಿದ್ಯಾರ್ಥಿಗಳಲ್ಲಿ ಮಾನಸಿಕ ಹಾಗೂ ದೈಹಿಕ ಸದೃಢತೆ ಜತೆಗೆ ಕ್ರಿಯಾಶೀಲತೆ ಹೆಚ್ಚಲು ಕ್ರೀಡೆ ಸಹಕಾರಿಯಾಗಲಿದೆ ಎಂದು ಶ್ರೀನಿವಾಸಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲಚಗೆರೆ ಹನುಮಂತರಾಜು ಅಭಿಪ್ರಾಯಪಟ್ಟರು.
ಶ್ರೀನಿವಾಸಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಪಂಚಾಯಿತಿಯಿಂದ ಆಯೋಜಿಸಿದ್ದ ಉಚಿತ ಕ್ರೀಡಾ ಸಾಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಓದಿನ ಜತೆಗೆ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು. ಕ್ರೀಡಾಕ್ಷೇತ್ರವೆಂದರೆ ಪ್ರತಿಯೊಬ್ಬರಿಗೂ ಆಸಕ್ತಿ. ಶಿಕ್ಷಣದ ಜತೆಗೆ ಕ್ರೀಡೆಗೆ ಆದ್ಯತೆ ನೀಡಿ ಸಾಧನೆ ಮಾಡಿದಲ್ಲಿ ಸಮಾಜದಲ್ಲಿ ಸ್ಮರಣೀಯವಾಗಿ ಉಳಿಯಬಹುದಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಿತ್ರಾ ಮಾತನಾಡಿ, ಗ್ರಾಮೀಣ ಭಾಗದ ಶಾಲೆಯಲ್ಲಿ ಕ್ರೀಡಾ ಸಾಮಾಗ್ರಿಗಳಿಲ್ಲದೆ ಸಾಕಷ್ಟು ಮಂದಿ ಕ್ರೀಡೆಯಿಂದ ವಂಚಿತರಾಗುತ್ತಿದೆ. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರ ನೇತೃತ್ವದಲ್ಲಿ ಗ್ರಾಮಪಂಚಾಯಿತಿ ವಿಶೇಷ ಅನುದಾನದಲ್ಲಿ ಪ್ರತಿ ಶಾಲೆಗೂ ಕ್ರೀಡಾ ಸಾಮಾಗ್ರಿ ವಿತರಣೆ ಮಾಡಲಾಗಿದೆ ಎಂದರು.