

ಉಡುಪಿ: ಪೆಟ್ರೋಲ್ ತೆರಿಗೆಯಲ್ಲಿ ಒಂದು ರೂ. ಸೆಸ್ ಸಂಗ್ರಹಿಸಿ ಕಾರ್ಮಿಕ ಇಲಾಖೆಗೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದೆ. ಇದರಿಂದ ವಾರ್ಷಿಕ 2,500 ಕೋಟಿ ರೂ ಸಂಗ್ರಹವಾಗಲಿದ್ದು, 1.30 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿಗೆ 10 ರಿಂದ 15 ಲಕ್ಷದವರೆಗೆ ಅರೋಗ್ಯ ವಿಮೆ ನೀಡಲು ಸಾಧ್ಯವಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಪುರ ಭವನದಲ್ಲಿ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಎರಡು ವರ್ಷಗಳಲ್ಲಿ ಕಾರ್ಮಿಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ 7 ಬಿಲ್ಗಳನ್ನು ಪಾಸ್ ಮಾಡಿದೆ. ದೇಶದಲ್ಲಿ ಮೊದಲ ಬಾರಿಗೆ ಗಿಗ್ ಕಾರ್ಮಿಕರಿಗಾಗಿ ಕಾಯ್ದೆ ಜಾರಿಗೊಳಿಸಿದ್ದು, ಇದರಿಂದ 4 ರಿಂದ 5 ಲಕ್ಷ ಆನ್ ಲೈನ್ ವಹಿವಾಟುದಾರರಿಗೆ ಅನುಕೂಲವಾಗಲಿದೆ. ದೇಶದಲ್ಲಿ ಪ್ರತಿ ನಿಮಿಷಕ್ಕೆ 20 ಮಂದಿ ಅಪಘಾತದಿಂದ ಸಾವನ್ನಪು$್ಪತ್ತಿದ್ದಾರೆ. ಈ ದುರ್ಟನೆಗಳಿಂದ ಅನೇಕ ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಬರುತ್ತಿದ್ದಾರೆ. ಇದರಿಂದ ದೇಶದ ಜಿಡಿಪಿಗೆ ಶೇ.3ರಷ್ಟು ಕೊರತೆಯಾಗುತ್ತಿದೆ. ಹೀಗಾಗಿ 25 ಲಕ್ಷ ಜನ ಸಾರಿಗೆ ಕ್ಷೇತ್ರದ ನೌಕರರಿಗಾಗಿ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೇ 10.50 ಲಕ್ಷ ಮಂದಿ ನೋಂದಾಯಿಸಿದ್ದಾರೆ. ಎಸ್ ಸಿ ಮತ್ತು ಎಸ್ ಟಿ ವರ್ಗದವರಿಗೆ ಖಾಸಗಿ ಕಂಪೆನಿಗಳು ಕೆಲಸ ನೀಡಿದರೆ 6 ತಿಂಗಳಿನಿಂದ 2 ವರ್ಷದವರೆಗೆ ಭವಿಷ್ಯನಿಧಿ ಮತ್ತು ಇಎಸ್ಐ ವಂತಿಗೆಯನ್ನು ರಾಜ್ ಸರ್ಕಾರದಿಂದ ಉದ್ಯೋಗದಾತರಿಗೆ ಮರುಪಾವತಿಸಲಾಗುತ್ತದೆ ಎಂದರು.
ಶಾಸಕ ಯಶ್ಪಾಲ್ ಎ. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಲಿಡ್ಕರ್ ಸಂಸ್ಥೆಯ ಅಧ್ಯಕ್ಷ ಮುಂಡರಗಿ ನಾಗರಾಜ್, ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಪೂರ್, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕನಿಷ್ಠ ವೇತನ ಮಂಡಳಿಯ ಅಧ್ಯಕ್ಷ ಶಾಹಿದ್, ಪ್ರಮುಖರಾದ ಉದಯ ಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಜಿಲ್ಲಾಧಿಕಾರಿ ಸ್ವರೂಪ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿ ರಾಮ್ ಶಂಕರ್, ಕಾರ್ಮಿಕ ಇಲಾಖೆಯ ಆಯುಕ್ತ ಡಾ. ಎಚ್.ಎನ್.ಗೋಪಾಲಕೃಷ್ಣ್ಣ, ಜಂಟಿ ಕಾರ್ಮಿಕ ಆಯುಕ್ತ ಡಾ. ರವಿಕುಮಾರ್, ಉಪ ಕಾರ್ಮಿಕ ಆಯುಕ್ತ ಎಚ್.ಎಲ್. ಗುರುಪ್ರಸಾದ್, ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಕಾರ್ಮಿಕ ನಿರೀಕ್ಷಕರಾದ ಸಂಜಯ್, ಮಲ್ಲಿಕ್ ಪ್ರಸಾದ್, ನವೀನ್, ವಿಜಯೇಂದ್ರ, ಎಕ್ಸಿಕ್ಯೂಟಿವ್ ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.