ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಮುಂದಕ್ಕೆ

Distribution of site title deeds to beneficiaries moves forward
Published on

ಬ್ಯಾಡಗಿ: ಪಟ್ಟಣದ ಮಲ್ಲೂರು ರಸ್ತೆಯ 10 ಎಕರೆ ಜಾಗದ ನಿವೇಶನ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಆಗಸ್ಟ್ ಕೊನೆಯ ವಾರದಲ್ಲಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಪುರಸಭೆ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್​ವುುನಾಫ್ ಎರೆಸೀಮೆ ತಿಳಿಸಿದರು.

ಪಟ್ಟಣದ ಪುರಸಭೆಯ ಆಶ್ರಯ ಸಮಿತಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಲ್ಲಿ ಪುರಸಭೆ ವ್ಯಾಪ್ತಿಯ ಮಲ್ಲೂರು ರಸ್ತೆಯಲ್ಲಿ 10 ಎಕರೆ ಜಾಗವನ್ನು ಬಡವರಿಗೆ ನಿವೇಶನ ವಿತರಿಸಲು ಕಾಯ್ದಿರಿಸಲಾಗಿದೆ. ಈ ಹಿಂದೆ 814 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಕಾರಣರಾಂತರಗಳಿಂದ ಹಕ್ಕುಪತ್ರ ವಿತರಣೆಯಾಗಿಲ್ಲ. ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರ ಅವರು ಆಶ್ರಯ ಸಮಿತಿಗೆ ಅಧ್ಯಕ್ಷ, ಸದಸ್ಯರನ್ನು ಸರ್ಕಾರದಿಂದ ನೇಮಿಸಿದ ಬಳಿಕ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ ಎಂದರು.

ಕಳೆದ ತಿಂಗಳು ಶಾಸಕರು ಪುರಸಭೆ ಸಾಮಾನ್ಯ ಸಭೆಯಲ್ಲಿ ಆ. 15ರಂದು ಬಡವರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಅರ್ಜಿದಾರರ ಆಧಾರ ಕಾರ್ಡ್ ಅಪ್​ಡೇಟ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಕೆಯಲ್ಲಿನ ವಿಳಂಬ ಸೇರಿದಂತೆ ಕೆಲ ತಾಂತ್ರಿಕ ಅಡಚಣೆಗಳಿಂದ ಹಕ್ಕುಪತ್ರ ವಿತರಣೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಆಗಸ್ಟ್ ಕೊನೆಯ ಇಲ್ಲವೇ ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮ ಆಯೋಜಿಸಿ ಹಕ್ಕುಪತ್ರ ವಿತರಿಸಲಾಗುವುದು. ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಪುರಸಭೆ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ಸಹಕಾರ ಪಡೆಯಲಾಗಿದೆ. ಅಂತಿಮ ಪಟ್ಟಿ ಆಯ್ಕೆ ತಹಸೀಲ್ದಾರ್, ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಜರುಗಲಿದೆ ಎಂದರು.

ಹಣ ಕೊಡಬೇಡಿ: ಸಮಿತಿ ಸದಸ್ಯ ದುರ್ಗೆಶ ಗೋಣೆಮ್ಮನವರ ಮಾತನಾಡಿ, ಆಶ್ರಯ ಸಮಿತಿ ಸದಸ್ಯರು ಯಾರಿಂದಲೂ ಹೊಸದಾಗಿ ಅರ್ಜಿ ಪಡೆಯುತ್ತಿಲ್ಲ, ಯಾರ ಮನೆಗೂ ತೆರಳಿಲ್ಲ. ಹಳೆಯ ಅರ್ಜಿಗಳಲ್ಲಿನ ಅರ್ಹ ಫಲಾನುಭವಿಗಳ ಆಯ್ಕೆ ನಡೆದಿದೆ. ಈ ಬಾರಿ ಎಲ್ಲ ದಾಖಲೆ ಪರಿಶೀಲಿಸಿದ್ದು ಅನರ್ಹರಿಗೆ ಅವಕಾಶ ಇಲ್ಲ. ಎಲ್ಲರಿಗೂ ನಿವೇಶನ ಉಚಿತವಾಗಿ ವಿತರಿಸುತ್ತಿದ್ದೇವೆ. ಯಾರೂ ಹಣ ಕೊಡುವ ಅಗತ್ಯವಿಲ್ಲ. ಯಾರೂ ಹಣ ಕೇಳುವುದಿಲ್ಲ, ಏಜೆಂಟರಿಗೆ ಅವಕಾಶ ನೀಡಿಲ್ಲ. ಒಂದು ವೇಳೆ ಯಾರಾದರೂ ಸುಳ್ಳು ಹೇಳಿ ಹಣ ಕೇಳಿದಲ್ಲಿ ಅಧ್ಯಕ್ಷರು, ಮುಖ್ಯಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಆಶ್ರಯ ಸಮಿತಿ ಸದಸ್ಯ ಗಿರೀಶ ಇಂಡಿಮಠ ಮಾತನಾಡಿ, ವರ್ಷಗಳ ಬಡವರ ಕನಸು ಈಗ ನನಸಾಗುತ್ತಿದೆ. ಹಕ್ಕುಪತ್ರ ವಿತರಣೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಉಚಿತ ನಿವೇಶನ ವಿತರಣೆ ನಡೆಯಲಿದೆ. ಶಾಸಕ ಬಸವರಾಜ ಶಿವಣ್ಣನವರ ಅವರು ಬಡವರಿಗೆ ಆರನೇ ಗ್ಯಾರಂಟಿ ಯೋಜನೆ ಘೊಷಿಸುವ ಮೂಲಕ 419 ಜನರಿಗೆ ಮೊದಲ ಹಂತದ ನಿವೇಶನ ಹಕ್ಕುಪತ್ರ ನೀಡಲಿದ್ದಾರೆ. ಇನ್ನುಳಿದವರಿಗೆ ಎರಡನೇ ಹಂತದಲ್ಲಿ ನಿವೇಶನ ಹಕ್ಕು ಪತ್ರ ವಿತರಣೆ ನಡೆಯಲಿದೆ. ಪಟ್ಟಣದ ಎಲ್ಲ ಅರ್ಹ ಬಡವರಿಗೂ ಸೂರು ಭಾಗ್ಯ ಸಿಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಮಜೀದ್ ಮುಲ್ಲಾ, ಮಂಜು ಬಗಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net