

ವಿಜಯವಾಣಿ ಸುದ್ದಿಜಾಲ ಶಿರಾ
ಪ್ರಕೃತಿಯೇ ದೇವರು, ಪ್ರಕೃತಿ ಉಳಿದರೆ ಮಾತ್ರ ನಾವು ಬದುಕಲು ಸಾಧ್ಯ. ಈಗಾಗಲೇ ಶಿರಾ ನಗರದಲ್ಲಿ 1000 ಎಕರೆ ಜಾಗವನ್ನು ಕೈಗಾರಿಕೆಗೆ ಮೀಸಲಿಟ್ಟಿದ್ದೇವೆ. ಆ ಪ್ರದೇಶದಲ್ಲಿ ಕೈಗಾರಿಕೆಗಳು ಆರಂಭವಾದರೆ ವಾಯು ಮಾಲಿನ್ಯ ಉಂಟಾಗುತ್ತದೆ. ಪ್ರತಿ ಮನೆಯವರು ಒಂದು ಮರ ಬೆಳೆಸಿ ತಮಗೆ ಬೇಕಾದ ಶುದ್ಧಗಾಳಿ ಪಡೆದುಕೊಳ್ಳಬೇಕು ಎಂದು ಶಾಸಕ ಟಿ.ಬಿ. ಜಯಚಂದ್ರ ಕರೆ ನೀಡಿದರು. ತಾಪಂ ಸಭಾಂಗಣದಲ್ಲಿ ಸೋಮವಾರ ಶಾಸಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತೆಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಇನ್ನು ಮುಂದೆ ನಗರಸಭೆಯವರು ಮನೆ ಮುಂದೆ ಮರ ಬೆಳೆಸಿದರೆ ಮಾತ್ರ ಮನೆ ಕಟ್ಟಲು ಪರವಾನಗಿ ಕೊಡಬೇಕು ಎಂದು ಆಯುಕ್ತ ರುದ್ರೇಶ್ ಹಾಗೂ ನಗರಸಭೆ ಅಧ್ಯ ಜೀಶಾನ್ ಮಹಮೂದ್ ಅವರಿಗೆ ಸೂಚಿಸಿದರು.
ಸರ್ಕಾರಿ ಹಾಗೂ ಖಾಸಗಿ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸಲು ಉತ್ತೇಜನ ನೀಡಬೇಕೆಂದು ಅರಣ್ಯ ವಲಯ ಅಧಿಕಾರಿ ನವನೀತ್ ಅವರಿಗೆ ತಿಳಿಸಿದರು. ತಾಲೂಕಿನಾದ್ಯಂತ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ಹಾಗೂ 15 ಸಾವಿರ ಸೈಟ್ಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮವನ್ನು ನವೆಂಬರ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿ ಕಾರ್ಯನಿರ್ವಹಿಸಬೇಕು ಎಂದರು. ಶಾಸಕರ ಹೇಳಿಕೆಗೆ ಉತ್ತರಿಸಿದ ತಾಪಂ ಇಒ ಹರೀಶ್, ಈಗಾಗಲೇ ಗ್ರಾಮೀಣ ಭಾಗದಲ್ಲಿ 600 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದ್ದು, ಅದರಲ್ಲಿ ಕನಿಷ್ಠ 12 ರಿಂದ 13 ಸಾವಿರ ನಿವೇಶನ ಹಾಗೂ ನಗರ ಪ್ರದೇಶದಲ್ಲಿ ನಾಲ್ಕರಿಂದ 5 ಸಾವಿರ ಸೈಟ್ಗಳನ್ನು ವಿತರಿಸಬಹುದು ಎಂದರು.
ಶಿರಾ ತಾಲೂಕಿನ ಶಾಲೆ ಒಂದರಲ್ಲಿ ವ್ಯಾಸಂಗ ಮಾಡುತ್ತಿರುವ ಒಂದೇ ಒಂದು ಮಗುವಿಗೋಸ್ಕರ ಶಾಲೆ ನಡೆಸಬೇಕಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಶಾಲೆ ಮುಚ್ಚುವಂತಿಲ್ಲ. ಇದರಿಂದ ವರ್ಷಕ್ಕೆ 8 ಲ ರೂ. ಖರ್ಚು ಮಾಡಲಾಗುತ್ತಿದೆ ಎಂದು ಬಿಇಒ ಕೃಷ್ಣಪ್ಪ ತಿಳಿಸಿದಾಗ ಆಶ್ಚರ್ಯಗೊಂಡ ಶಾಸಕರು, ಆ ಮಗುವನ್ನು ಆರ್ಟಿಇ ಅಡಿಯಲ್ಲಿ ಬೇರೆ ಶಾಲೆಗೆ ಸೇರಿಸಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು ಹಾಗೂ ಶಿರಾ ತಾಲೂಕಿನಲ್ಲಿ ಎಷ್ಟು ವಿದ್ಯಾರ್ಥಿಗಳು ಆರ್ಟಿಇ ಅಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ?. ಆ ಶಾಲೆಗಳಿಗೆ ಸರ್ಕಾರದಿಂದ ಎಷ್ಟು ಹಣ ಸಂದಾಯವಾಗುತ್ತಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಸುಮಾರು 600 ವಿದ್ಯಾರ್ಥಿಗಳು ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಅಂತಹ ಶಾಲೆಗಳಿಗೆ ವರ್ಷಕ್ಕೆ 25 ಕೋಟಿ ನಮ್ಮ ತಾಲೂಕಿನಿಂದ ನೀಡಲಾಗುತ್ತಿದೆ ಎಂದು ತಿಳಿಸಿದಾಗ ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿದುಕೊಳ್ಳಿ ಎಂದು ಶಾಸಕರು ಸೂಚಿಸಿದರು.