

ಚನ್ನಗಿರಿ: ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಒಂದು ವರ್ಷದಲ್ಲೇ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಒದಗಿಸುತ್ತೇನೆ ಎಂದು ಶಾಸಕ ಬಸವರಾಜ ಶಿವಗಂಗಾ ಭರವಸೆ ನೀಡಿದರು.
ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಬೀಜ, ಗೊಬ್ಬರ ವಿತರಣೆ, ರೈತ ಸಂಪರ್ಕ ಕೆಂದ್ರದ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದ ಶಾಸಕರು, ಜಿಲ್ಲಾ ಕಿಸಾನ್ ರೈತಸಂಘದ ಅಧ್ಯಕ್ಷನಾಗಿ, ರೈತರ ಮಗನಾಗಿ ಅನ್ನದಾತರ ನೋವು ನನಗೆ ತಿಳಿದಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಅಧಿಕಾರಿಗಳು ರೈತರ ಜತೆ ಆಟವಾಡಬಾರದು. ಎಲ್ಲರ ಕೈಯಲ್ಲೂ ನನ್ನ ಮೊಬೈಲ್ ನಂಬರ್ ನೀಡಲಾಗಿದೆ. ಕರೆಗಳು ನೇರವಾಗಿ ನನಗೆ ಬರುತ್ತವೆ. ರೈತರ ಕೆಲಸಗಳಿಗೆ ನಿರ್ಲಕ್ಷ್ಯ ಮಾಡುವಂತ ಯಾವುದೇ ಅಧಿಕಾರಿ ಇದ್ದರೂ ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಕಚೇರಿಗಳಿಗೆ ರೈತರು ಅಲೆಯುವಂತೆ ಮಾಡಬೇಡಿ ಎಂದು ಎಚ್ಚರಿಸಿದರು.
38ಸಾವಿರ ಹೆಕ್ಟೇರ್ ಬಿತ್ತನೆ ಗುರಿ: ತಾಲೂಕಿನಲ್ಲಿ 38ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಮೆಕ್ಕೆಜೋಳ 2250 ಹೆ, ಭತ್ತ 12500 ಹೆ, ತೊಗರಿ 650 ಹೆ. ಹತ್ತಿ 350 ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ಬೆಳೆಗಳನ್ನು ಬೆಳೆಯಲಾಗುತ್ತದೆ. ತಾಲೂಕಿನ ಪಾಂಡೋಮಟ್ಟಿ, ದೇವರಹಳ್ಳಿ, ಸಂತೇಬೆನ್ನೂರು, ತ್ಯಾವಣಗಿ, ಚನ್ನಗಿರಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಅನುಕೂಲವಾಗುವಂತೆ ಬಿತ್ತನೆಬೀಜ ಹಾಗೂ ಗೊಬ್ಬರ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 6325 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜವನ್ನು ಬಿಲ್ ಪಡೆದು ಖರೀದಿಸಬೇಕು. ಲೂಸ್ ಬಿತ್ತನೆ ಬೀಜವನ್ನು ಮಾರಾಟ ಮಾಡಬಾರದು. ಅಂತಹ ಪ್ರಕರಣ ಕಂಡುಬಂದಲ್ಲಿ ಅಂಗಡಿ ಮಾಲಿಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.
ರಸಗೊಬ್ಬರ ಮಾರಾಟಗಾರರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು, ಮೆಕ್ಕೆಜೋಳ, ತೊಗರಿ, ಅಲಸಂಧೆ, ಸೋಯಾಬಿನ್ ಬೀಜಗಳು ರೈತರಿಗೆ ಸಿಗಲಿವೆ. ಪಿಎಂ ಕಿಸಾನ್ ಯೋಜನೆಯಲ್ಲಿ 42 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ, 28 ಸಾವಿರ ಇ-ಕೆವೈಸಿ ಮಡಿಸಿರುತ್ತಾರೆ. ಉಳಿದವರು ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಲೂಕು ಕೃಷಿ ನಿರ್ದೇಶಕ ಅರುಣ್‌ಗುನ್ನಾ, ತಾಪಂ ಮಾಜಿ ಸದಸ್ಯ ಷಡಾಕ್ಷರಿ ಮಾವಿನಕಟ್ಟೆ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ್ ಗೌಡ್ರು, ಪುರಸಭೆ ಸದಸ್ಯ ನಿಂಗಪ್ಪ, ಕೆ.ಜಿ.ಉಮೇಶ್ ಇದ್ದರು.