

ವಿಜಯವಾಣಿ ಸುದ್ದಿಜಾಲ ವಿಜಯಪುರ
ವಿದ್ಯಾರ್ಥಿಗಳು ಶಾಲೆಯಲ್ಲಿ ಗಮನವಿಟ್ಟು ಕಲಿಯಬೇಕು. ಮೊಬೈಲ್‌ನಲ್ಲಿ ಪಠ್ಯಪುಸ್ತಕ ವಿಷಯವನ್ನು ನೋಡಿ ಅರ್ಥಮಾಡಿಕೊಳ್ಳಬಹುದು. ಆದರೆ ಮೊಬೈಲ್‌ಗೇ ದಾಸರಾಗಬಾರದು ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಶ್ರೀನಗರೇಶ್ವರ ಪ್ರಾರ್ಥನಾ ಮಂದಿರದಲ್ಲಿ ಸೋಮವಾರ ನಗರ್ತ ಯುವಕ ಸಂಘದ ಆಶ್ರಯದಲ್ಲಿ 25ನೇ ವಿದ್ಯಾರ್ಥಿವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಪಿ.ಮುರಳಿಧರ್ ಮಾತನಾಡಿ, ಪಟ್ಟಣದಲ್ಲಿ ನಗರ್ತ ಯುವಕ ಸಂಘವು 1999ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 25 ವರ್ಷದಿಂದ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಸಂಘಧ ಕಾರ್ಯ ಚಟುವಟಿಕೆಗಳನ್ನು ಅವಲೋಕಿಸಿ 70 ಮಂದಿ ದಾನಿಗಳು ಹಾಗೂ ಪಟ್ಟಣದ ಕೀರ್ತಿಶೇಷ ಪಿ.ಆರ್.ನಾಗರಾಜಪ್ಪ ಅವರ ಸ್ಮರರ್ಣಾರ್ಥ ಕೌಸಲ್ಯಾ ನಾಗರಾಜ್ ಆರೋಗ್ಯನಿಧಿಗೆ 1 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನಕ್ಕೆ ನೀಡಿದ್ದಾರೆ.
ಬೆಂಗಳೂರಿನ ನಿವಾಸಿ ಕೀರ್ತಿಶೇಷ ವಿ.ಪುಟ್ಟರಾಜ್ ಅವರ ಸ್ಮರಣಾರ್ಥ ಜಗದಾಂಬ ಆರೋಗ್ಯ ನಿಧಿಗೆ 50,000, ವಿದ್ಯಾರ್ಥಿವೇತನಕ್ಕೆ 50,000 ನೀಡಿರುತ್ತಾರೆ ಎಂದು ವಿವರಿಸಿದರು.
ರೋಟರಿ ಶಾಲೆಯ ಹಿರಿಯ ಶಿಕ್ಷಕರಾದ ಕಲಾವತಿ ಬಿ.ರಿತ್ತಿ ಮತ್ತು ಡೇಟಾ ಮತ್ತು ಸೈನ್ಸ್ ವಿಭಾಗದಲ್ಲಿನ ಸೇವೆಗಾಗಿ, ಗೌರವ ಡಾಕ್ಟರೇಟ್ ಪಡೆದಿರುವ ಶ್ರೀ ವೆಂಕಟೇಶ್ವರ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಎಸ್ ಸಂತೋಷ್ ಕುಮಾರ್ ಮತ್ತು ದಾನಿಗಳಾದ ಎಂ.ಕೌಸಲ್ಯಾ ನಾಗರಾಜ್, ಜಗದಾಂಬ ಪುಟ್ಟರಾಜ್, ಎಂ.ಚಿನ್ಮಯ್ ಮೋಹನ್ ಅವರನ್ನು ಸನ್ಮಾನಿಸಲಾಯಿತು.
ಕೋರಮಂಗಲ ರುದ್ರಪ್ಪ ಟ್ರಸ್ಟ್ ಮತ್ತು ಎವಿವಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷ ಸಿ.ಭಾಸ್ಕರ್, ಗೌರವ ಕಾರ್ಯದರ್ಶಿ ಅಮರ್, ಸಹ ಕಾರ್ಯದರ್ಶಿ ಮನೋಹರ್, ಖಜಾಂಚಿ ಸುನೀಲ್, ನಿಕಟಪೂರ್ವ ಅಧ್ಯಕ್ಷ ಎಂ.ಶಿವಪ್ರಸಾದ್, ಎನ್.ರುದ್ರಮೂರ್ತಿ, ಮಾಜಿ ಅಧ್ಯಕ್ಷ ಬಿ.ಸಿ.ಸಿದ್ದರಾಜ್, ಮಹಂತಿನ ಮಠ ಧರ್ಮ ಸಂಸ್ಥೆಯ ಅಧ್ಯಕ್ಷ ಪುನೀತ್ ಶಿವಕುಮಾರ್, ಕಾರ್ಯದರ್ಶಿಗಳಾದ ವಿ.ವಿಶ್ವನಾಥ್, ಸಿ.ಸುರೇಶ್, ಪಿ.ಮೋಹನ್ ಮತ್ತು ಅಂಗ ಸಂಸ್ಥೆಯ ಪದಾಧಿಕಾರಿಗಳು ಇದ್ದರು.