ಮಹಿಳಾ ಪೌರಕಾರ್ಮಿಕರಿಗೆ ಸೀರೆ ವಿತರಣೆ

6
Published on

ಮೈಸೂರು: ದಿವಂಗತ ನಟ ವಿಷ್ಣುವರ್ಧನ್ ಮೂಲತಃ ಮೈಸೂರಿನವರಾದರೂ ವಿಶ್ವದಲ್ಲೇ ಜನಪ್ರಿಯರಾಗಿದ್ದಾರೆ. ಅವರ ಪ್ರತಿಯೊಂದು ಚಿತ್ರಗಳು ಸಹ ಕೌಟುಂಬಿಕ ಪ್ರಧಾನವಾಗಿವೆ ಎಂದು ನಟ ಮಂಡ್ಯ ರಮೇಶ್ ತಿಳಿಸಿದರು.
ನಗರ ಚಾಮುಂಡಿಪುರಂ ವೃತ್ತದ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಿಷ್ಣುವರ್ಧನ್ ಅವರ 13ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಸೀರೆ ವಿತರಿಸಿ ಮಾತನಾಡಿದರು.


ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜತೆಗೆ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿಸುವಲ್ಲಿ ವಿಷ್ಣುವರ್ಧನ್ ಮಾದರಿಯಾಗಿದ್ದರು. ಕನ್ನಡ ನೆಲ, ಜಲ, ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತಿದ್ದರು. ಚಿತ್ರನಗರಿ ಮೈಸೂರಿನಲ್ಲಿ ಸ್ಥಾಪನೆಯಾಗಬೇಕು ಎಂಬ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನ್ ಅವರು ಎಂದರು.

ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಗರಡಿಯ ಶಿಷ್ಯನಾಗಿ ಗುರುತಿಸಿಕೊಂಡ ವಿಷ್ಣುವರ್ಧನ್ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಸಾರ್ವಜನಿಕರಿಗೆ ಗುರು-ಹಿರಿಯರಿಗೆ ಅಪಾರ ಗೌರವ ನೀಡುತ್ತಿದ್ದರು. ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರತಿಯೊಂದು ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದರು ಎಂದರು.

ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಕುಮಾರ್, ಎನ್.ಎಂ.ನವೀನ್ ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಮುಖಂಡರಾದ ವಿನಯ್ ಕಣಗಾಲ್, ಅಜಯ್ ಶಾಸ್ತ್ರಿ, ಸಂದೀಪ್, ಎಸ್.ಎನ್. ರಾಜೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net