

ಗಜೇಂದ್ರಗಡ: ತಾಲೂಕಿನ ನೆಲ್ಲೂರ ಗ್ರಾಮದಲ್ಲಿರುವ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರದಲ್ಲಿ ಸರ್ಕಾರದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಲಾಗುತ್ತಿದ್ದು, ರೈತರು ಸದುಪಯೋಗ ಪಡೆಯಬೇಕು ಎಂದು ಗಜೇಂದ್ರಗಡ ಉಪ ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಸಾಸ್ವಿಹಳ್ಳಿ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ರೈತರು, ಸಂಘ-ಸಂಸ್ಥೆಗಳು ಬಯಸುವ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಿ, ಸಸಿಗಳನ್ನು ನೆಟ್ಟು ಬೆಳೆಸಲು ಸರ್ಕಾರ ‘ಕೃಷಿ ಅರಣ್ಯ ಪ್ರೋತ್ಸಾಹ’ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಡಿ ಅರಣ್ಯೇತರ ಜಮೀನಿನಲ್ಲಿ ಹೆಚ್ಚಿನ ಮರ, ಗಿಡಗಳನ್ನು ಬೆಳೆಸಿ ಹಸಿರು ಹೊದಿಕೆ ನಿರ್ಮಿಸಬಹುದಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ನೆಲ್ಲೂರು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರಕ್ಕೆ ತೆರಳಿ ದಾಖಲೆ ನೀಡಿ, ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.