

ಕಳಸ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕಳಸ ಗ್ರಾಪಂ 75 ಫಲಾನುಭವಿಗಳಿಗೆ ಮತ್ತು ಇಡಕಣಿ ಗ್ರಾಪಂ ಚನ್ನಡ್ಲು ಗ್ರಾಮದ 15 ಅತಿವೃಷ್ಟಿ ಸಂತ್ರಸ್ತರಿಗೆ ಶಾಸಕಿ ನಯನಾ ಮೋಟಮ್ಮ ಹಕ್ಕುಪತ್ರ ವಿತರಿಸಿದರು.
2019ರಲ್ಲಿ ಭಾರಿ ಮಳೆಗೆ ಮನೆ ಕಳೆದುಕೊಂಡು 5 ವರ್ಷ ಕಳೆದರೂ ನಿರಾಶ್ರಿತರಿಗೆ ಹಕ್ಕುಪತ್ರ ಸಿಗದೆ ರೋಸಿ ಹೋಗಿದ್ದರು.ನಿವೇಶನಕ್ಕಾಗಿ ನಿರಾಶ್ರಿತರು ಪ್ರಧಾನಮಂತ್ರಿಗೆ ಪತ್ರ ಬರೆದು ಎರಡು ಎಕರೆ 20 ಗುಂಟೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದರು. ಇದರಲ್ಲಿ ನಿವೇಶನ ಪಡೆಯಲು ಸಂತ್ರಸ್ತರು ಮುಖಂಡ ರವಿ ರೈ ನೇತೃತ್ವದಲ್ಲಿ ಕಳಸ ನಾಡಕಚೇರಿ ಎದುರು 12 ದಿನ ಧರಣಿ ನಡೆಸಿ ನಿವೇಶನ ಪಡೆದುಕೊಂಡಿದ್ದರಾದರೂ ಹಕ್ಕುಪತ್ರ ಪಡೆದುಕೊಳ್ಳಲು ವಿಫಲರಾಗಿದ್ದರು.
ಮೂರು ದಶಕಗಳಿಂದ ನಿವೇಶನ ಹಂಚಿಕೆಯಾಗದ ಕಳಸದಲ್ಲಿ ಶುಕ್ರವಾರ 75 ಜನರಿಗೆ ಶಾಸಕಿ ಹಕ್ಕುಪತ್ರ ವಿತರಿಸಿದರು. ಕುದುರೆಮುಖ ನಿರಾಶ್ರಿತರಾಗಿದ್ದ ಅಲ್ಲಿಯ ದಿನಗೂಲಿ ನೌಕರರು 15 ವರ್ಷಗಳ ಹಿಂದೆ ಕಲ್ಲಾಟಗುಡ್ಡದಲ್ಲಿ ಸಿಪಿಐ ನೇತೃತ್ವದಲ್ಲಿ ಟೆಂಟ್ ಹಾಕಿ ಪತ್ರಿಭಟನೆ ಮಾಡಿ 10 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದರು. ಇದರಲ್ಲಿ ಐದು ಎಕರೆ ಭೂಮಿ ಕಳಸ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗೆ ಮತ್ತು ಐದು ಎಕರೆ ಕುದುರೆಮುಖ ದಿನಗೂಲಿ ನೌಕರರಿಗೆ ಮೀಸಲಿಡಲಾಗಿತ್ತು. ಕಳಸ ಗ್ರಾಪಂ ವ್ಯಾಪ್ತಿಯ ಈ ಫಲಾನುಭವಿಗಳನ್ನು ಗ್ರಾಪಂಚಾಯಿತಿ 4 ವರ್ಷದ ಹಿಂದೆಯೇ ಲಾಟರಿ ಮೂಲಕ ಆಯ್ಕೆ ಮಾಡಿತ್ತು.
ನಾನು ಮತ ಕೇಳಲು ಬಂದ ಸಂದರ್ಭದಲ್ಲಿಯೇ ಚನ್ನಡ್ಲು ನಿರಾಶ್ರಿತರಿಗೆ ಹಕ್ಕು ಪತ್ರ ಕೊಡಿಸುವುದಾಗಿ ಮಾತುಕೊಟ್ಟಿದ್ದೆ. ಅದರಂತೆ ಹಕ್ಕು ಪತ್ರ ವಿತರಣೆ ಮಾಡಿದ್ದೇನೆ. ಕಳಸ ಗ್ರಾಪಂ ವ್ಯಾಪ್ತಿಯ 75 ಫಲಾನುಭವಿಗಳಿಗೆ ಕಲ್ಮಕ್ಕಿ ಸಮೀಪದ ಹಕ್ಕು ಪತ್ರ ನೀಡಲಾಗಿದೆ. ಈ ಹೊಸ ಬಡಾವಣೆಯ ಅಭಿವೃದ್ಧಿಗೆ ನನ್ನ ನಿಧಿಯಿಂದ ಅನುದಾನ ನೀಡುತ್ತೇನೆ. ಇದರೊಂದಿಗೆ ನಾನು ಚಿಕ್ಕಮಟ್ಟದ ಯಶಸ್ಸು ಕಂಡಿದ್ದೇನೆ. ಕುದುರೆಮುಖ ನಿರಾಶ್ರಿತ ದಿನಗೂಲಿ ನೌಕರರಿಗೆ, ಮಲೆಮನೆ ಮತ್ತು ಮಧುಗುಂಡಿ ಸಂತ್ರಸ್ತರಿಗೂ ಸದ್ಯದಲ್ಲೇ ಹಕ್ಕುಪತ್ರ ಒದಗಿಸುವ ಪ್ರಯತ್ನ ನಡೆದಿದೆ. ನನಗೆ ಯಾರು ಮತ ಹಾಕಿದ್ದಾರೆ ಅನ್ನೋದು ಮುಖ್ಯ ಅಲ್ಲ. ಊರಿನ ಅಭಿವೃದ್ಧಿ ಮುಖ್ಯ. ಕಳಸ ಹಿಂದುಳಿದ ತಾಲೂಕು. ಇಲ್ಲಿನ ಅಭಿವೃದ್ಧಿ ನನ್ನ ಗುರಿ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ, ಉಪಾಧ್ಯಕ್ಷ ರಂಗನಾಥ್, ಪಪಂ ಅಧ್ಯಕ್ಷ ರವೀಂದ್ರ, ಮೂಡಿಗೆರೆ ಇಒ ದಯಾವತಿ, ಕಳಸ ತಹಸೀಲ್ದಾರ್ ದಯಾನಂದ, ಕಳಸ ಪಿಡಿಒ ಕವೀಶ್, ಸದಸ್ಯರಾದ ಕಾರ್ತಿಕ್ ಶಾಸ್ತ್ರಿ, ಸಂತೋಷ್ ಹಿನಾರಿ, ಸುಜಯಾ ಸದಾನಂದ, ವೀರೇಂದ್ರ ಜೈನ್, ಭಾಸ್ಕರ್, ಪಾಪಣ್ಣ ಇದ್ದರು.