

ಲಿಂಗದಹಳ್ಳಿ: ತಾಲೂಕುಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ 60 ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ಮತ್ತು 50 ಮಂದಿಗೆ ವಿವಿಧ ಮಾಸಾಶನಗಳ ಮಂಜೂರಾತಿ ಪತ್ರ ನೀಡಲಾಗುತ್ತಿದೆ. ಇತರ ಕಾರ್ಯಕ್ರಮದಲ್ಲಿ ಬಂದಿರುವ 941 ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ತರೀಕೆರೆ ಉಪವಿಭಾಗಾಧಿಕಾರಿ ಡಾ. ಕಾಂತರಾಜು ತಿಳಿಸಿದರು.
ತಾಲೂಕು ಆಡಳಿತದಿಂದ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಹೋಬಳಿಯಲ್ಲಿ 16148 ಖಾತೆದಾರರಿದ್ದಾರೆ. ಇವರಲ್ಲಿ 802 ಖಾತೆ ಪೌತಿಯಾಗಿವೆ ಎಂದರು.
ಹೋಬಳಿಯ 28 ಗ್ರಾಮಗಳಲ್ಲಿ 4 ಗ್ರಾಮಗಳನ್ನು ಹೊರತುಪಡಿಸಿ ಉಳಿದ ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಜಾಗ ಕಾಯ್ದಿರಿಸಲಾಗಿದೆ. ಇನ್ನುಳಿದಿರುವ ನಾಲ್ಕು ಗ್ರಾಮಗಳಿಗೂ ಸೂಕ್ತ ಜಾಗದಲ್ಲಿ ಸ್ಮಶಾನಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಮುಂದಿನ ಕೆಲ ದಿನಗಳಲ್ಲೇ ಸರ್ಕಾರದ ಆದೇಶದಂತೆ 1 ರಿಂದ 5 ರ ಮೂಲಕ ಪೋಡಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ತರೀಕೆರೆ ತಾಲೂಕಿನ ಸುಮಾರು 911 ಕೆರೆಗಳು ಒತ್ತುವರಿಯಾಗಿವೆ. ಕೆರೆ ಮತ್ತು ರಸ್ತೆ ಒತ್ತುವರಿ ತೆರವುಗೊಳಿಸಲಾಗುವುದು. ರೈತರು ಪಹಣಿಗಳಿಗೆ ಆಧಾರ್ ಜೋಡಣೆ ಮಾಡಿಸಬೇಕು. ಆಗ ಸರ್ಕಾರದ ಸೌಲಭ್ಯಗಳು ಸುಲಭವಾಗಿ ತಲುಪಲಿವೆ ಎಂದು ಹೇಳಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಈ ಹಿಂದೆ ತರೀಕೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಜನಸ್ಪಂದನಾ ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮಗಳನ್ನು ಆಯೋಜಿಸಿ ಅವುಗಳ ಮೂಲಕ ಬಂದಿದ್ದ ಸಾವಿರಾರು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಹೋಬಳಿಯ ಶೇ.70 ಮಂದಿಗೆ 94 (ಸಿ) ಹಕ್ಕು ಪತ್ರಗಳನ್ನು ನೀಡಲಾಗಿದ್ದು, ಬಾಕಿ ಉಳಿದ ಶೇ.30 ಮಂದಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ರಾಜೀವ್, ಲಿಂಗದಹಳ್ಳಿ ಉಪ ತಹಸೀಲ್ದಾರ್ ನಾಗೇಂದ್ರನಾಯ್ಕ, ಕಂದಾಯ ಅಧಿಕಾರಿ ಆರ್.ರಮೇಶ್, ತಾಪಂ ಇಒ ಡಾ. ದೇವೇಂದ್ರಪ್ಪ, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಇಂದ್ರಮ್ಮ, ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ ಇತರರಿದ್ದರು.