

ತರೀಕೆರೆ: ಸರ್ಕಾರದ ಹಂತದಲ್ಲಿ ಕಂದಾಯ ಮತ್ತು ಉಪ ಗ್ರಾಮ ರಚನೆ ಪ್ರಕ್ರಿಯೆ ಜಾರಿಯಲಿದ್ದು, ಈ ಮೂಲಕ 10 ಸಾವಿರ, ಗ್ರಾಮಠಾಣಾ ವಿಸ್ತರಣೆ ಮೂಲಕ ಕ್ಷೇತ್ರದ 10,900 ಸಾವಿರ ಕುಟುಂಬಗಳಿಗೆ ಸದ್ಯದಲ್ಲಿಯೇ 94ಸಿ ಮತ್ತು 94ಸಿಸಿ ಯಡಿ ಹಕ್ಕುಪತ್ರ ಸಿಗಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಹುಣಸಘಟ್ಟ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಶಾಂತಿ ನಗರದಲ್ಲಿ 20 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ 1 ಕೋಟಿ ರೂ. ವೆಚ್ಚದಲ್ಲಿ ಹೊಸಳ್ಳಿ ತಾಂಡದಿಂದ ವಿಠಲಾಪುರಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅಜ್ಜಂಪುರ ಹಾಗೂ ತರೀಕೆರೆ ತಾಲೂಕುಗಳನ್ನೊಳಗೊಂಡ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡಲಾಗುತ್ತಿದೆ. ಅನುದಾನದ ಲಭ್ಯತೆ ಅನುಸಾರ ಮಹತ್ವದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಸದ್ಯದಲ್ಲಿಯೇ ಹೊಸಳ್ಳಿ ತಾಂಡದಿಂದ ಹಾಲು ಮಲ್ಲೇಶ್ವರ ಸ್ವಾಮಿ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಭಾಗದ ಇನ್ನಿತರ ಕಾಮಗಾರಿಗಳಿಗೂ ಒತ್ತು ನೀಡಲಾಗುವುದು ಎಂದರು.
ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಯಾನಂದ್, ತಾಪಂ ಇಒ ಡಾ.ಆರ್.ದೇವೇಂದ್ರಪ್ಪ, ಗ್ರಾಪಂ ಪ್ರಭಾರ ಅಧ್ಯಕ್ಷ ರಮೇಶನಾಯ್ಕ, ಮಾಜಿ ಅಧ್ಯಕ್ಷ ಬಸವರಾಜನಾಯ್ಕ, ಮಂಜುನಾಥ, ಸದಸ್ಯರಾದ ಪ್ರಿಯಾಂಕ, ವಿನೋದ ಬಾಯಿ, ಗಂಗಮ್ಮ, ಶೇಖರನಾಯ್ಕ, ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯ ಮಲ್ಲಿಕಾರ್ಜುನಪ್ಪ, ಪಿಡಿಒ ಚೇತನ್ ಮತ್ತಿತರರಿದ್ದರು.