ಬಡವರಿಗೆ ಪಡಿತರ ವಿತರಣೆ ; ಹಕ್ಕಿಪಿಕ್ಕಿ ಕುಟುಂಬಗಳ ಯೋಗ ಕ್ಷೇಮ ವಿಚಾರಿಸಿದ ನ್ಯಾಯಾಧೀಶರು

17Tmk_Corona_Emergency_01
Published on

ತುಮಕೂರು: ನಗರ ಹೊರವಲಯದಲ್ಲಿ ನೆಲೆಸಿರುವ 32 ನಿರಾಶ್ರಿತ ಹಕ್ಕಿಪಿಕ್ಕಿ ಬಡ ಕುಟುಂಬಗಳಿಗೆ ಅಗತ್ಯ ಪಡಿತರಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವ್ ಕುಮಾರ್ ವಿತರಿಸಿದರು.

ಕೇಂದ್ರೀಯ ವಿದ್ಯಾಲಯದ ಬಳಿಯಿರುವ ಹಕ್ಕಿಪಿಕ್ಕಿ ಜನಾಂಗ ವಾಸಿಸುತ್ತಿರುವ ಗುಡಿಸಲುಗಳಿಗೆ ಶುಕ್ರವಾರ ಭೇಟಿ ನೀಡಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು. ಕರೊನಾ ಹಿನ್ನೆಲೆಯಲ್ಲಿ ಜಾಗೃತಿ ವಹಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆವಹಿಸುವಂತೆ ತಿಳಿಹೇಳಿದರು. ಕಳೆದ 5-6ವರ್ಷಗಳಿಂದ ಈ ಗುಡಿಸಲುಗಳಲ್ಲಿ 130 ಜನರು ವಾಸವಾಗಿದ್ದು, ಹಿಂದಿನ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ನಮಗೆ ಈ ಜಾಗವನ್ನು ಮಂಜೂರು ಮಾಡಿದ್ದು ಆದರೆ, ಮನೆಗಳನ್ನು ಕಟ್ಟಿಸಿಕೊಡುವ ಭರವಸೆ ಈಡೇರಿಲ್ಲ. ನಾವು ವಾಸಿಸುತ್ತಿರುವ ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲ, ಮೂಲ ಸೌಕರ್ಯವಿರುವುದಿಲ್ಲ. ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಭೀತಿ ಇದ್ದು ಜೀವಕೈಯಲ್ಲಿ ಹಿಡಿದು ಬದುಕುತ್ತಿದ್ದೇವೆ ಎಂದು ಜನಾಂಗದ ಮುಖಂಡ ರವಿಕುಮಾರ್ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.

ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ್, ಹೆಚ್ಚುವರಿ ಪ್ರಿನ್ಸಿಪಲ್ ನ್ಯಾಯಾಧೀಶ ಪುಟ್ಟರಂಗಶೆಟ್ಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಸಿಪಿಐ ಸಿ.ಎಚ್.ರಾಮಕೃಷ್ಣಯ್ಯ, ಪಿಎಸ್ಸೈ ಎಂ.ಬಿ.ಲಕ್ಷ್ಮಯ್ಯ ಮೊದಲಾದವರು ಇದ್ದರು.

ಮಕ್ಕಳು ಶಾಲೆಗೆ ಹೋಗ್ತಾರಾ?: ಈ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ? ದಿನನಿತ್ಯದ ಜೀವನಕ್ಕಾಗಿ ಏನು ಕಸುಬು ಮಾಡುತ್ತಿದ್ದೀರಿ ಎಂದು ನ್ಯಾ.ಹಂಚಾಟೆ ಸಂಜೀವ್ ಕುಮಾರ್ ಅಲ್ಲಿದ್ದವರನ್ನು ಪ್ರಶ್ನಿಸಿದರು. ಪ್ಲಾಸ್ಟಿಕ್ ಹೂವಿನ ಹಾರಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತೇವೆ. ಜತೆಗೆ ಹಳ್ಳಿಗಳಿಗೆ ಹೋಗಿ ಮಸಾಲೆ ಪದಾರ್ಥ ಮಾರುತ್ತೇವೆ ಸ್ವಾಮಿ ಎಂದು ಮಹಿಳೆಯರು ಉತ್ತರಿಸಿದರು. ಬಡವರು ಹಾಗೂ ನಿರ್ಗತಿಕರಿಗೆ ವಿತರಿಸಲಾಗುತ್ತಿರುವ ಹಾಲು ಈ ಭಾಗದ ನಮಗೆ ಪೂರೈಕೆಯಾಗುತ್ತಿಲ್ಲವೆಂದು ನ್ಯಾಯಾಧೀಶರ ಗಮನಕ್ಕೆ ತಂದರು.

ಮುಖ್ಯಮಂತ್ರಿಗೆ ಪತ್ರ : ಲಾಕ್‌ಡೌನ್ ಮುಕ್ತಾಯದ ಬಳಿಕವೂ ಮದ್ಯದಂಗಡಿ ತೆರೆಯಬೇಡಿ. ಮದ್ಯದಂಗಡಿಗಳನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರ ಘೋಷಿಸಿ ಎಂದು ಸಿಎಂಗೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ಮಾಜಿ ಕಾರ್ಪೊರೇಟರ್ ಪ್ರೆಸ್ ರಾಜಣ್ಣ ಪತ್ರ ಬರೆದಿದ್ದಾರೆ.

ಪಡಿತರ ಚೀಟಿ ಸಿಕ್ಕಿಲ್ಲ: ಪಡಿತರ ಚೀಟಿ ನೀಡುವುದಾಗಿ ಎಲ್ಲರೂ ಹೇಳುತ್ತಾರೆ. ಆದರೆ ರೇಷನ್ ಕಾರ್ಡ್ ಸಿಕ್ಕಿಲ್ಲ. ಎಲ್ಲರಿಗೂ ಮತದಾರರ ಗುರುತಿನ ಚೀಟಿ ನೀಡಲಾಗಿದೆ. ನಿವೇಶನಗಳ ಮಂಜೂರಾತಿ ಪತ್ರ ಕೂಡ ಕೊಟ್ಟಿದ್ದಾರೆ. ಆದರೆ, ಮನೆಕಟ್ಟಿ ಕೊಡುವರ‌್ಯಾರು ಎಂದು ರವಿಕುಮಾರ್ ಅಳಲುತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net