

ವಿಜಯಪುರ: ಮಹಿಳೆಯರು ವಿವಿಧ ಸಿರಿಧಾನ್ಯ ಉತ್ಪನ್ನಗಳನ್ನು ರುಚಿಕಟ್ಟಾಗಿ ತಯಾರಿಸಿ, ಬಳಕೆ ಮಾಡಿದಲ್ಲಿ ಆರೋಗ್ಯವಂತರಾಗಿ ದೀರ್ಘಕಾಲ ಬಾಳಬಹುದು ಎಂದು ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ಇಲ್ಲಿನ ವೆಂಕಟೇಶ್ವರ ನಗರದ ಆಂಜನೇಯ ದೇವಸ್ಥಾನದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಖಿಲ ಭಾರತ ಸಮನ್ವಿತ ಜೋಳ ಸುಧಾರಣೆ ಯೋಜನೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಸಿರಿಧಾನ್ಯ ಖಾದ್ಯಗಳ ತಯಾರಿಕೆಯಲ್ಲಿ ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿರಿಧಾನ್ಯಗಳು ಬರನಿರೋಧಕ ಶಕ್ತಿ ಹೊಂದಿದ್ದು, ಅತೀ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಇವುಗಳಲ್ಲಿ ಹೆಚ್ಚು ಪೌಷ್ಠಿಕಾಂಶ, ನಾರಿನಾಂಶ ಇರುವುದರಿಂದ ಬೇಗ ಜೀರ್ಣವಾಗಿ ಉತ್ತಮ ಆರೋಗ್ಯ ಹೊಂದಲು ಸಹಾಯವಾಗುತ್ತದೆ. ಕಾರಣ ಹೆಚ್ಚೆಚ್ಚು ಸಿರಿಧಾನ್ಯ ಬೆಳೆದು ಮೌಲ್ಯವರ್ಧಿಸಿ, ವಿವಿಧ ಉತ್ಪನ್ನ ತಯಾರಿಸಿ ಕುಟುಂಬದವರಿಗೆ ಸೇವಿಸುವಂತೆ ಮಾಡಿ, ನಂತರ ಮಾರಾಟ ಮಾಡಿ ಅಧಿಕ ಲಾಭಗಳಿಸಬೇಕೆಂದರು.
ಹಿರಿಯ ಕ್ಷೇತ್ರ ಅಧಿಕ್ಷಕ ಡಾ. ಆರ್.ಬಿ. ಜೊಳ್ಳಿ ಹಾಗೂ ಜೋಳ ತಳಿ ವಿಜ್ಞಾನಿ ಡಾ. ಎಸ್.ಎಸ್. ಕರಬಂಟನಾಳ ವಿವಿಧ ಖಾದ್ಯ ತಯಾರಿಸಿದ ಉತ್ಪನ್ನಗಳ ಮೌಲ್ಯಮಾಪನ ಮಾಡಿ ಪ್ರಶಂಸೆ ವ್ಯಕ್ತಪಡಿಸುತ್ತಾ, ಸಿರಿಧಾನ್ಯಗಳಾದ ಜೋಳ, ನವಣೆ, ಸಜ್ಜೆ, ಬರಗು ಇತ್ಯಾದಿಗಳಲ್ಲಿ ಹೇರಳ ಪೋಷಕಾಂಶಗಳಿದ್ದು, ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಂದ ದೂರವಿರಬಹುದೆಂದರು.
ಬನಶಂಕರಿ ಮಹಿಳಾ ಸಂಸ್ಥೆ ಅಧ್ಯಕ್ಷೆ ಶ್ರೀವಾಣಿ ಕುಲಕರ್ಣಿ ಮಾತನಾಡಿ, ನಮ್ಮ ಸಂಸ್ಥೆಯ ಸ್ವಸಹಾಯ ಮಹಿಳಾ ಸಂಘದ ಸದಸ್ಯರಿಗೆ ಈಗಾಗಲೇ 15 ದಿವಸಗಳ ತರಬೇತಿ ಕೊಡಿಸಿದ್ದು, ಅವರು ತಯಾರಿಸುವ ಉತ್ಪನ್ನಗಳ ಜೊತೆಗೆ ಇತರ ಮಹಿಳೆಯರು ತಯಾರಿಸುವ ಖಾದ್ಯಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದೆಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಸ್.ಎಂ. ವಸ್ತ್ರದ ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಳ್ಳಲಾಗುವ ವಿವಿಧ ತರಬೇತಿಗಳು, ಮಹಿಳಾ ಉದ್ಯಮಶೀಲತೆ ಕುರಿತು ವಿಶೇಷ ತರಬೇತಿ ಹಮ್ಮಿಕೊಳ್ಳಲಾಗುವುದೆಂದರು.
ಕಾರ್ಯಕ್ರಮ ಆಯೋಜಕಿ ಡಾ. ಶ್ವೇತಾ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಚೋಗಟಾಪೂರ ಮತ್ತಿತರರಿದ್ದರು.