

ಮೂಡಿಗೆರೆ: ಮೂಡಿಗೆರೆ ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಪಪಂನಿಂದ ಜಾಗ ಗುರುತಿಸಲಾಗಿದ್ದು, ಸರ್ಕಾರದ ಅನುಮೋದನೆ ದೊರೆತ ಕೂಡಲೇ ಪುತ್ಥಳಿ ನಿರ್ಮಿಸಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿವೇಶನ ಫಲಾನುಭವಿಗಳು ಎಂದು ಅಮಾಯಕರನ್ನು ಕರೆತಂದು ಶಾಸಕರ ಕಚೇರಿ ಮತ್ತು ಸರ್ಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿಜವಾಗಿ ಅಂಬೇಡ್ಕರ್ ಅನುಯಾಯಿಗಳಾಗಿದ್ದರೆ ನೈಜ ಫಲಾನುಭವಿಗಳಿಗೆ ನಿವೇಶದ ನೀಡಲು ಒತ್ತಾಯಿಸಲಿ ಅದು ಬಿಟ್ಟು ಹೋರಾಟದ ನಾಟಕವಾಡುವವರಿಗೆ ನಿವೇಶನ ಹಂಚಿಕೆ ಸಾಧ್ಯವಿಲ್ಲ ಎಂದರು.
ಒಂದು ಬಿಪಿಎಲ್ ಪಡಿತರ ಚೀಟಿಗೆ ಒಂದು ನಿವೇಶನ ನೀಡಬಹುದು. ನಾನು ಶಾಸಕಿಯಾದ ನಂತರ ಕಳಸದಲ್ಲಿ 75 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. 2019ರಲ್ಲಿ ಅತಿವೃಷ್ಠಿಯಿಂದ ಮನೆ ಕಳೆದುಕೊಂಡ ಚೆನ್ನಡ್ಲು ಗ್ರಾಮದ 14 ಕುಟುಂಬಕ್ಕೆ ಹಕ್ಕುಪತ್ರ, ಕುಂದೂರು, ಸಾರಗೋಡಿನ ನಿರಾಶ್ರಿತರಿಗೆ ತಲಾ 2 ಎಕರೆ ಜಮೀನು ಮತ್ತು ಮನೆ ನಿರ್ಮಾಣಕ್ಕೆ 4 ಗುಂಟೆ ಜಾಗ ನೀಡಲಾಗಿದೆ. ನಂದಿಪುರ ಗ್ರಾಮದ 44 ಹಾಗೂ ಬಿ.ಹೊಸಳ್ಳಿ ಗ್ರಾಮದ 23 ಕುಟುಂಬಕ್ಕೆ ಶೀಘ್ರದಲ್ಲಿ ಹಕ್ಕುಪತ್ರ ನೀಡಲಾಗುವುದು. ಈಗಾಗಲೇ ನಿವೇಶನ ರಹಿತ 105 ಕುಟುಂಬಕ್ಕೆ ನಿವೇಶನ ಒದಗಿಸಲಾಗಿದೆ ಎಂದು ತಿಳಿಸಿದರು.
ಪಪಂ ಅಧ್ಯಕ್ಷ ಕೆ.ವೆಂಕಟೇಶ್, ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯರಾದ ಕಮಲಮ್ಮ ಮನೋಜ್ ಕುಮಾರ್, ಖುರ್ಷಿದಾ ಬಾನು, ಬಿ.ಕೆ.ಜಯಮ್ಮ, ಇಒ ದಯಾವತಿ, ಬಿಇಒ ಮೀನಾಕ್ಷಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಬಿ.ಆರ್.ನವೀನ್, ಎಲ್.ಬಿ.ರಮೇಶ್, ಅಂಗಡಿ ಚಂದ್ರು, ಬಿ.ಎಂ.ಶಂಕರ್, ಬಿ.ಎಚ್.ಮಹಮ್ಮದ್,ಬೆಟ್ಟಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಜಾಕಿರ್ ಹುಸೇನ್, ಸಿಪಿಐ ರಾಜಶೇಖರ್, ಪಿ.ಕೆ.ಮಂಜುನಾಥ್, ಸುರೇಂದ್ರ ಉಗ್ಗೆಹಳ್ಳಿ, ಬೆಟ್ಟಗೆರೆ ಮಂಜುನಾಥ್, ಡಿ.ಕೆ.ಲಕ್ಷ್ಮಣಗೌಡ ಇತರರಿದ್ದರು.