

ಮನೋಹರ್ ಬಳಂಜ ಬೆಳ್ತಂಗಡಿ
ಬೆಳ್ತಂಗಡಿ ಅರಣ್ಯ ಇಲಾಖೆಯ ಮುಂಡಾಜೆ ಗ್ರಾಮದ ನಿಡಿಗಲ್ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕ ವಿತರಣೆಗೆ ನಾನಾ ಬಗೆಯ ಗಿಡಗಳು ಸಿದ್ಧವಾಗಿವೆ. ಮುಂಡಾಜೆಯ ಕಾಪು ಬಳಿ ಮೃತ್ಯುಂಜಯ ನದಿ ಬದಿ ಇದ್ದ ಸಸ್ಯ ಕ್ಷೇತ್ರವನ್ನು ಗ್ರಾಮದ ನೇತ್ರಾವತಿ ನದಿ ತೀರದಲ್ಲಿರುವ ನಿಡಿಗಲ್‌ಗೆ ಸ್ಥಳಾಂತರಿಸಲಾಗಿದ್ದು, ಈ ಬಾರಿ ಸಸ್ಯಗಳು ನಿರೀಕ್ಷೆಯಂತೆ ಚೆನ್ನಾಗಿ ಸಿದ್ಧವಾಗಿವೆ.
ಅಳಿವಿನಂಚಿನಲ್ಲಿರುವ ಹಾಗೂ ಕುಂಟಾಲು, ದಾಲ್ಚಿನಿ, ನೆಲ್ಲಿ, ದೂಪ, ರಾಮಪತ್ರೆ, ಬಲೀಂದ್ರ ಪಾಳೆ, ಕಾಯಿ ದೂಪ, ಉಂಡೆ ಹುಳಿ, ಹೆಬ್ಬಲಸು, ನೇರಳೆ, ಮಾವು, ಸೀತ ಅಶೋಕ, ಸಿರಿ ಹೊನ್ನೆ, ಹೊಂಗೆ, ಗಾಳಿ, ಸಂಪಿಗೆ, ಶಾಂತಿ, ಬೊಲ್ ಪಾಲೆ, ರಂಬುಟನ್, ಬಿಲ್ವಪತ್ರೆ, ರೆಂಜೆ, ಸಾಗುವಾನಿ, ಬೆತ್ತ, ಬಾದಾಮ್, ಮಹಾಗನಿ, ಹಲಸು, ಬೀಟೆ, ಕಿರಾಲ್ ಬೋಗಿ, ಕುಳುರು ಮಾವು, ಪುನರ್ಪುಳಿ ಸೇರಿದಂತೆ ಒಟ್ಟು 1 ಲಕ್ಷಕ್ಕಿಂತ ಅಧಿಕ ಗಿಡಗಳನ್ನು ವಿತರಣೆಗಾಗಿ ತಯಾರಿಸಲಾಗಿದೆ. ಇದರಲ್ಲಿ ಇಲಾಖೆಯ ನೆಡುತೋಪು, ಸಂಘ ಸಂಸ್ಥೆಗಳಿಗೆ, ಶಾಲೆಗಳಿಗೆ ಹಾಗೂ ಸಾರ್ವಜನಿಕ ವಿತರಣೆಗೆ ಗಿಡಗಳನ್ನು ನೀಡಲಾಗುತ್ತದೆ.
ಗಿಡಗಳ ಗಾತ್ರಕ್ಕನುಗುಣವಾಗಿ ರೂ.3ರಿಂದ 7ರ ದರದಲ್ಲಿ ಗಿಡಗಳನ್ನು ಮಾರಾಟ ಮಾಡಲಾಗುತ್ತದೆ. ಅರಣ್ಯ ಇಲಾಖೆ ಸಂಗ್ರಹಿಸಿ ಬೆಳೆಸಿದ ಈ ಗಿಡಗಳು ಉತ್ತಮ ಗುಣಮಟ್ಟ ಹೊಂದಿದ್ದು ಹಸಿರು ಬೆಳೆಸಿ ಪ್ರಕೃತಿಯನ್ನು ಉಳಿಸುವ ಧ್ಯೇಯ ಹೊಂದಿರುವ ಆಸಕ್ತರಿಗೆ ಹೆಚ್ಚಿನ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಮಳೆಗಾಲ ಆರಂಭಕ್ಕೆ ಒದಗಿಸಲಿದೆ.
ಬೆಳ್ತಂಗಡಿ ತೋಟಗಾರಿ ಇಲಾಖೆಯ ಬೆಳ್ತಂಗಡಿ ಸಸ್ಯಗಾರ ಹಾಗೂ ಮದ್ದಡ್ಕ ತೋಟಗಾರಿಕೆ ಕ್ಷೇತ್ರದಲ್ಲಿ ಮಂಗಳ, ಮೋಹಿತ್ ನಗರ, ಸೈಗಾನ್, ರತ್ನಗಿರಿ ಇಂಟರ್ ಸಿ ಮಂಗಳ, ಅಡಕೆ ಸಸಿಗಳು 25ರೂ.ಗೆ ಲಭ್ಯವಿದೆ. ಕಾಳುಮೆಣಸಿನ ಪನಿಯೂರು, ಕರಿಮುಂಡ, ಕಸಿಕಾಳು ಮೆಣಸು 11 ರೂ.ನಿಂದ 32 ದರದಲ್ಲಿ, ಹೈಬ್ರಿಡ್ ಕೊಕ್ಕೋ 8 ರೂ., ಕಸಿ ಸೀಬೆ 45 ರೂ. ನುಗ್ಗೆ ಸಸಿ 11ರೂ., ಕಸಿಮಾವು 42 ರೂ., ಕಸಿ ಸಪೋಟ 46 ರೂ. ಗಳಿಗೆ ಲಭ್ಯವಿದೆ. ಕಚೇರಿ ಸಮಯದಲ್ಲಿ ಇದನ್ನು ಪಡೆಯಬಹುದಾಗಿದೆ ಎಂದು ಇಲಾಖೆಯ ಅಧಿಕಾರಿ ಭೀಮರಾಯ ಸೊಡ್ಡಗಿ ತಿಳಿಸಿದ್ದಾರೆ.
ಈ ಹಿಂದೆ ಮುಂಡಾಜೆಯ ಕಾಪು ಬಳಿ ಮೃತ್ಯುಂಜಯ ನದಿ ಬದಿ ಇದ್ದ ಸಸ್ಯ ಕ್ಷೇತ್ರವನ್ನು ಪ್ರಸ್ತುತ ಅದೇ ಗ್ರಾಮದ ನೇತ್ರಾವತಿ ನದಿ ತೀರದಲ್ಲಿರುವ ನಿಡಿಗಲ್‌ಗೆ ಸ್ಥಳಾಂತರಿಸಲಾಗಿದೆ. ಕಾಪು ಸಸ್ಯ ಕ್ಷೇತ್ರವಿದ್ದ ಜಾಗದ ಮೂಲಕ ಹೆದ್ದಾರಿ ಹಾದು ಹೋಗುವ ಕಾರಣಕ್ಕಾಗಿ ನಿಡಿಗಲ್‌ಗೆ ಸ್ಥಳಾಂತರಿಸಲಾಗಿತ್ತು. ಕಾಪುವಿನಲ್ಲಿ ಮೃತ್ಯುಂಜಯ ನದಿಯಲ್ಲಿ ಇರುವಷ್ಟು ನೀರು ನೇತ್ರಾವತಿ ನದಿಯಲ್ಲಿ ಇಲ್ಲದ ಕಾರಣ ಗಿಡಗಳನ್ನು ಬೆಳೆಸಲು ಇಲಾಖೆ ಸಾಕಷ್ಟು ಶ್ರಮಪಟ್ಟಿದೆ. ಕಾಪುವಿನಲ್ಲಿ ನರ್ಸರಿಗೆ ವರ್ಷದಲ್ಲಿ ಹಲವು ಸಲ ಕಾಡಾನೆ ದಾಳಿ ನಡೆಸುವುದು ಮಾಮೂಲಾಗಿತ್ತು. ಆದರೆ ನಿಡಗಲ್‌ನಲ್ಲಿ ಇದೂವರೆಗೆ ಆನೆಗಳು ಕಂಡು ಬಂದಿಲ್ಲದ ಕಾರಣ ಈ ಬಾರಿ ಗಿಡಗಳು ನಾಶವಾಗಿಲ್ಲ.
ಕಳೆದ ವರ್ಷ ಗಿಡಗಳ ಗಾತ್ರಕ್ಕನುಗುಣವಾಗಿ ಇಲಾಖೆ ವತಿಯಿಂದ ಗಿಡಗಳ ದರವನ್ನು 5ರೂ.ನಿಂದ 23ರ ತನಕ ಉತ್ಪಾದನಾ ವೆಚ್ಚ ಅಧಿಕವಾದ ಆಧಾರದಲ್ಲಿ ಏರಿಸಲಾಗಿತ್ತು. ಸಾರ್ವಜನಿಕರು ಈ ದರದಲ್ಲಿ ಗಿಡಗಳನ್ನು ಕೊಳ್ಳಲು ಹಿಂದೇಟು ಹಾಕಿದ್ದರು. ಈ ಬಗ್ಗೆ ವರದಿಗಳು ಪ್ರಕಟವಾದ ಬಳಿಕ ಇಲಾಖೆ ದರವನ್ನು 3ರೂ.ಗಳಿಂದ 7ರ ತನಕ ನಿಗದಿಪಡಿಸಿದ್ದು, ಈ ವರ್ಷವೂ ಅದೇ ದರದಲ್ಲಿ ಗಿಡಗಳನ್ನು ನೀಡಲಿದೆ.
ಸಾರ್ವಜನಿಕರಿಗೆ ನೀಡುವ ಪ್ರತಿ ಗಿಡಕ್ಕೆ ಒಂದು ವರ್ಷದ ಬಳಿಕ ಮುಂದಿನ ಮೂರು ವರ್ಷ ಅವುಗಳ ಬೆಳವಣಿಗೆ ಆಧಾರದಲ್ಲಿ 135 ರೂ. ಸಹಾಯಧನ ಇಲಾಖೆಯಿಂದ ಸಿಗುತ್ತದೆ. ಸಸ್ಯಕ್ಷೇತ್ರದಿಂದ ಗಿಡಗಳನ್ನು ಪಡೆಯುವ ಆಸಕ್ತರು ಆಧಾರ್ ಕಾರ್ಡ್, ಭಾವಚಿತ್ರ, ಆರ್‌ಟಿಸಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ನಕ್ಷೆಯ ನಕಲು ಪ್ರತಿ ಜತೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ನಿಡಿಗಲ್ ಸಸ್ಯಕ್ಷೇತ್ರದಿಂದ ಜೂ.1ರಿಂದ ಗಿಡಗಳನ್ನು ಪಡೆಯಬಹುದು.- ಬಿ.ಜಿ.ಮೋಹನ ಕುಮಾರ್ಆರ್‌ಎಫ್‌ಒ, ಅರಣ್ಯ ಇಲಾಖೆ, ಬೆಳ್ತಂಗಡಿ. https://www.vijayavani.net/nursery-plant