

ಮದ್ದೂರು: ಮಂಡ್ಯ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲ್ಪಟ್ಟಿರುವ 86 ಜನ ಜೀತ ವಿಮುಕ್ತರಿಗೆ ಸರ್ಕಾರದ ಮಹತ್ವದ 13 ವಿವಿಧ ಗುರುತಿನ ಚೀಟಿ ಅಥವಾ ದಾಖಲೆಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಜೀತ ವಿಮುಕ್ತ ಕುಟುಂಬದವರಿಗೆ ಆಯೋಜಿಸಿದ್ದ ಗುರುತಿನ ಚೀಟಿ ಹಾಗೂ ಆರೋಗ್ಯ ಉಚಿತ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀತ ಪದ್ಧತಿ ಕಾನೂನುಬಾಹಿರ ಎಂದು ತಿಳಿದಿದ್ದರೂ ಮುಗ್ಧ ಜನರು ಜೀತ ಪದ್ಧತಿಗೆ ಬಲಿಯಾಗುತ್ತಾರೆ. ಜೀತ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಜೀತ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿದ್ದರೂ ಕೆಲವರು ಬಡತನದಿಂದ ಜೀತದಾಳಾಗಿ ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಒಟ್ಟು 86 ಜನರನ್ನು ಜೀತ ವಿಮುಕ್ತರನ್ನಾಗಿ ಮಾಡಿದ್ದು, ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಇಲಾಖೆಗಳ ಸೌಲಭ್ಯ ಪಡೆಯಲು ಸರ್ಕಾರದ 13 ದಾಖಲೆ ನೀಡಲಾಗುತ್ತಿದೆ. ಇದರೊಂದಿಗೆ ಅವರ ಆರೋಗ್ಯ ತಪಾಸಣೆ ಸಹ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಗುರುತಿನ ಚೀಟಿ ನೀಡಲಾಗುತ್ತಿದ್ದು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪಡೆದು ಇನ್ನೂ ಮುಂದೆ ಸ್ವಾವಲಂಬಿಗಳಾಗಿ ಜೀವನ ನಡೆಸಬಹುದು ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಜೀತ ವಿಮುಕ್ತರಿಗೆ ಆಧಾರ್ ಕಾರ್ಡ್, ಜನನ-ಮರಣ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ-ಆದಾಯ ಪ್ರಮಾಣ ಪತ್ರ, ಪಡಿತರ ಗುರುತಿನ ಚೀಟಿ, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಬ್ಯಾಂಕ್ ಉಳಿತಾಯ ಖಾತೆ, ವಿವಿಧ ಯೋಜನೆಗಳಡಿ ಪಿಂಚಣಿ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಆರೋಗ್ಯ ವಿಮೆಗಳು(ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ), ಇ-ಶ್ರಮ್ ಗುರುತಿನ ಕಾರ್ಡ್, ಯುಡಿಐಡಿ ಗುರುತಿನ ಚೀಟಿ, ಭಾಗ್ಯಲಕ್ಷ್ಮೀ ಯೋಜನೆ, ಮನರೇಗಾ ಉದ್ಯೋಗ ಚೀಟಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಜೀತವಿಮುಕ್ತರ ಬಾಳಿನಲ್ಲಿ ಸಂಜೀವಿನಿಯ ಬೆಳಕು ಅಭಿಯಾನದಡಿ ಜೀತವಿಮುಕ್ತರ ಕುಟುಂಬದ ಅರ್ಹ ಮಹಿಳೆಯರನ್ನು ಎನ್‌ಆರ್‌ಎಲ್‌ಎಂ ಯೋಜನೆಯ ‘ಸಂಜೀವಿನಿ’ ಸ್ವಸಹಾಯ ಸಂಘಗಳಿಗೆ ಸೇರ್ಪಡೆ ಮಾಡಲಾಗಿದೆ. ಆ ಮೂಲಕ ಸಾಲ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ನಡೆಸಲು ಅನುವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಆರ್‌ಎಸ್‌ಇಟಿಐ ವತಿಯಿಂದ ಜೀತವಿಮುಕ್ತರ ಕುಟುಂಬದ ಅರ್ಹ ಯುವಕ, ಯುವತಿಯರಿಗೆ ಇತರ ವೃತ್ತಿಕೌಶಲ ತರಬೇತಿ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇ-ಸ್ವತ್ತು ಅಭಿಯಾನ-ನನ್ನ ಗುರುತು ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು ಜೀತವಿಮುಕ್ತರ ಸ್ವಂತ ಸೂರಿಗೆ ದಾಖಲೆ ಒದಗಿಸುವ ಕಾರ್ಯ. ಈಗಾಗಲೇ 49ಕ್ಕೂ ಹೆಚ್ಚು ಇ-ಸ್ವತ್ತುಗಳು, ಅರ್ಹ ವಯಸ್ಸಿನ ಜೀತವಿಮುಕ್ತರ ಕುಟುಂಬದವರಿಗೆ 172 ಇ-ಶ್ರಮ್ ಕಾರ್ಡ್‌ಗಳು, 180 ಕ್ಕೂ ಹೆಚ್ಚು ಸ್ವಸಹಾಯ ನೋಂದಣಿ, 10 ಜಾತಿ ಆದಾಯ ಪ್ರಮಾಣ ಪತ್ರ, 180ಕ್ಕೂ ಹೆಚ್ಚು ಪಿಎಂಜೆಜೆಬಿವೈ/ಪಿಎಂಎಸ್‌ಬಿವೈ, ಯುಡಿಐಡಿ ಗುರುತಿನ ಚೀಟಿ, ನರೇಗಾ ಇತ್ಯಾದಿ ಸವಲತ್ತುಗಳನ್ನು ಒದಗಿಸಿ, ಜೀತವಿಮುಕ್ತರು ಸ್ವಾಭಿಮಾನದ ಬದುಕಿಗೆ ಜಿಲ್ಲಾ ಪಂಚಾಯತ್ ನೆರವಾಗಿದೆ ಎಂದರು.
ಜೀತವಿಮುಕ್ತರ ಕುಟುಂಬಗಳಿಗೆ ಭಾರತಿನಗರ ಗ್ರಾಮ ಪಂಚಾಯತ್ ವತಿಯಿಂದ ಸೋಲಾರ್ ಲೈಟ್ ಮತ್ತು ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಗವುದು ಎಂದು ತಿಳಿಸಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಕಾರ್ಯನಿರ್ವಾಹಣಾಧಿಕಾರಿ ರಾಮಲಿಂಗಯ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.