200 ವಿದ್ಯಾರ್ಥಿಗಳಿಗೆ ನಮೋ ವಿದ್ಯಾನಿಧಿ ಸ್ಕಾಲರ್‌ಶಿಪ್ ವಿತರಣೆ

namo vidhyanidi
Published on

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಕಾರಣಗಳಿಂದ ಶಿಕ್ಷಣಕ್ಕೆ ಹಿನ್ನಡೆ ಆಗಬಾರದು ಎಂಬ ಕಾರಣಕ್ಕೆ ಸಂಸದ ತೇಜಸ್ವೀ ಸೂರ್ಯ ನೇತೃತ್ವದಲ್ಲಿ ಆರಂಭಿಸಿರುವ ‘ನಮೋ ವಿದ್ಯಾನಿಧಿ ಸ್ಕಾಲರ್‌ಶಿಪ್’ ಗುರುವಾರ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಪೋಷಕರು ಆರ್ಥಿಕ ಕಾರಣಗಳಿಗಾಗಿ ತಮ್ಮ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಪ್ರೋತ್ಸಾಹ ನೀಡದ ಸಂದರ್ಭಗಳಿವೆ. ಹಲವು ವಿದ್ಯಾರ್ಥಿಗಳ ಕನಸುಗಳು ಇಂತಹದ್ದೇ ಕಾರಣಕ್ಕಾಗಿ ಕಮರಿಹೋದ ಸನ್ನಿವೇಶಗಳಿವೆ. ಕುಟುಂಬದ ಬಡತನ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಅಂತ್ಯಕ್ಕೆ ಕಾರಣವಾಗಬಾರದು ಎಂಬ ಉದ್ದೇಶದಿಂದ ಹಲವು ದಾನಿಗಳ ಸಹಕಾರದಿಂದ ವಿದ್ಯಾನಿಧಿ ಯೋಜನೆ ರೂಪಿಸಲಾಗಿದೆ. ಈ ಸ್ಕಾಲರ್‌ಶಿಪ್‌ನ ಸಾರ್ಥಕತೆ ಎಂದರೆ, ಸಹಾಯ ಪಡೆದ ಮಕ್ಕಳು ಹೆಚ್ಚಿನ ಅಂಕ ಗಳಿಸುವ ಮೂಲಕ ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಪೋಷಕರು ನಿರ್ವಹಿಸಬೇಕಾದ ಆದ್ಯ ಕರ್ತವ್ಯಗಳ ಕುರಿತು ಮನವರಿಕೆ ಮಾಡಿಕೊಟ್ಟರು. ಜತೆಗೆ ಭವಿಷ್ಯ ಭಾರತದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ಮನ ಮುಟ್ಟುವಂತೆ ವಿವರಿಸಿದರು.

ಇದೇ ವೇಳೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಒಟ್ಟು 200 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿದ್ಯಾನಿಧಿ ಟ್ರಸ್ಟಿಗಳಾದ ಎಸ್.ವಿ.ಎಸ್.ಗುಪ್ತಾ, ಗುರುಪ್ರಸಾದ್ ಮಾಕಮ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net