

ನರಗುಂದ: ರಾಷ್ಟ್ರೀಯ ಪೋಷಣ ಅಭಿಯಾನದ ಅಡಿ ತಾಲೂಕಿನ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ ಸರ್ಕಾರದಿಂದ ನೀಡಲಾಗುವ ಉಚಿತ ಸ್ಮಾರ್ಟ್‌ಫೋನ್‌ಗಳನ್ನು ಶಾಸಕ ಸಿ.ಸಿ. ಪಾಟೀಲ ಶುಕ್ರವಾರ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಜಗತ್ತು ಡಿಜಿಟಲೀಕರಣದತ್ತ ಮುಖ ಮಾಡುತ್ತಿದೆ. ಅಂಗನವಾಡಿ ನೌಕರರು ತಮ್ಮ ಕಾರ್ಯದೊತ್ತಡದ ನಡುವೆಯೂ ಸರ್ಕಾರದ ಹಲವಾರು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದಾರೆ. ಕಾರ್ಯಕರ್ತೆಯರಿಗೆ ನೀಡಿರುವ ಮೊಬೈಲ್‌ಗಳನ್ನು ಸರಿಯಾಗಿ ಅಂಗನವಾಡಿ ಕೇಂದ್ರಗಳ ಕೆಲಸಗಳಿಗಾಗಿ ಉಪಯೋಗವಾಗುವಂತೆ ಬಳಸಿಕೊಳ್ಳಬೇಕು. ಈ ಹಿಂದೆಯೂ 2021ರಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಕಾರ್ಯಕರ್ತೆಯರಿಗೆ ನೀಡಲಾಗಿತ್ತು. ಅವುಗಳ ಕಾರ್ಯ ಅಸಮರ್ಪಕವಾಗಿರುವ ಕುರಿತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಹೊಸದಾಗಿ ಮೊಬೈಲ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಎಸ್.ಹುಲಕೋಟಿ ಮಾತನಾಡಿ, ಮೊಬೈಲ್‌ಗಳು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಅಗತ್ಯವಿದ್ದು, ಇದರಿಂದ ಮಕ್ಕಳ ಹಾಜರಾತಿ, ಆಯಾ ಮತ್ತು ಕಾರ್ಯಕರ್ತೆಯರ ಹಾಜರಾತಿ, ಮಕ್ಕಳಿಗೆ ನೀಡುವ ಆಹಾರ ಪ್ರಮಾಣದ ದಾಖಲೆ, ಮಕ್ಕಳ ಬೆಳವಣಿಗೆಯ ನಿಗಾ ಇರಿಸಲು ಅನೂಕುಲವಾಗಲಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಮತ್ತು ಹಳೆಯ ಮೊಬೈಲ್‌ಗಳನ್ನು 10 ದಿನಗಳೊಗಾಗಿ ಹಿಂದಿರುಗಿಸಬೇಕು ಎಂದರು. ಪಟ್ಟಣ ಸೇರಿ ತಾಲೂಕಿನ 130 ವಿವಿಧ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಐವರು ಮೇಲ್ವಿಚಾರಕಿಯರಿಗೆ ಮೊಬೈಲ್ ಫೋನ್ ವಿತರಿಸಲಾಯಿತು.
ಪೋಷಣ ಅಭಿಯಾನ ಯೋಜನೆ ಸಹಾಯಕ ಮಂಜುನಾಥ ಗುಗ್ಗರಿ, ಅಂಗನವಾಡಿ ಮೇಲ್ವಿಚಾರಕಿಯರಾದ ಕಾವೇರಿ ಅತ್ತಿಮರದ, ಜಯಶ್ರೀ ಅಂಗಡಿ, ಅನ್ನಪೂರ್ಣಾ ಹಡಪದ, ಅಂಗನವಾಡಿ ಕಾರ್ಯಕರ್ತೆಯರಾದ ಸಿ.ಎಂ. ಮುಲ್ಲಾನವರ, ಪಿ.ಐ. ಹುಯಿಲಗೋಳ, ಬೇಬಿ ದೊಡಮನಿ, ಶಿವಲೀಲಾ ಹಿರೇಮಠ, ಕೆ.ಡಿ. ಚಕ್ರಸಾಲಿ, ಕುಲಕರ್ಣಿ, ಕೆ.ಬಿ. ಪೂಜಾರ, ಎಸ್.ಎನ್. ಶಿರೋಳ, ಮಂಜುಳಾ ಅಣ್ಣಿಗೇರಿ, ಎಸ್.ಎಸ್.ಸುಳ್ಳಿಕೇರಿ, ಪಿ.ಬಿ. ಹೂಗಾರ, ಎಸ್.ಎಸ್. ಪಾಟೀಲ ಉಪಸ್ಥಿತರಿದ್ದರು.