ವಿದ್ಯಾರ್ಥಿನಿಯರಿಗಾಗಿ ‘ಮುಟ್ಟಿನ ಕಪ್’: ಜಿಪಂನಿಂದ ವಿನೂತನ ಯೋಜನೆ ಜಾರಿಗೆ

Distribution of Menstrual Cups for Schoolgirls Mandya
Published on

ಮಂಡ್ಯ: ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು ಜಿಲ್ಲಾ ಪಂಚಾಯಿತಿಯಿಂದ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ‘ಮುಟ್ಟಿನ ಕಪ್’ ವಿತರಣೆ ಮಾಡಲಾಗುತ್ತಿದೆ.

ಸ್ಯಾನಿಟರಿ ಪ್ಯಾಡ್‌ಗೆ ಪರ್ಯಾಯವಾಗಿ ಮುಟ್ಟಿನ ಕಪ್ ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಅವರ ಆಲೋಚನೆಯಂತೆ ಯೋಜನೆ ಜಾರಿಯಾಗುತ್ತಿದೆ. ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಅನುದಾನ ಬಳಸಿಕೊಂಡು ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ ಕೊಡಲಾಗುತ್ತಿದೆ. ಇನ್ನು ಈ ಯೋಜನೆ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀ ರೋಗ ಸಂಘ ಕೈಜೋಡಿಸಿದೆ. ಈ ಯೋಜನೆ ಅಭಿಯಾನದ ಮಾದರಿಯಲ್ಲಿ ನಡೆಯಲಿದೆ.

ವಿದ್ಯಾರ್ಥಿನಿಯರಿಗೆ ಜಾಗೃತಿ: ಮಹತ್ವದ ಯೋಜನೆ ಅನುಷ್ಠಾನಗೊಳಿಸುವ ಮುನ್ನ ಮುಟ್ಟಿನ ಕಪ್ ಬಗ್ಗೆ ಜಾಗೃತಿ ಅಥವಾ ಅರಿವು ಮೂಡಿಸುವ ಅಭಿಯಾನ ಈಗಾಗಲೇ ಯಶಸ್ವಿಯಾಗಿ ಮುಗಿದಿದೆ. ಜಿಲ್ಲಾ ಸ್ತ್ರೀರೋಗ ಮತ್ತು ಪ್ರಸೂತಿ ಸಂಘದ ವೈದ್ಯರು ಜಿಲ್ಲಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗೆ ತೆರಳಿ ವಿದ್ಯಾರ್ಥಿನಿಯರಿಗೆ ಮುಟ್ಟು ಮತ್ತು ಮುಟ್ಟಿನ ಕಪ್ ಬಳಕೆ ಹಾಗೂ ನೈರ್ಮಲ್ಯ ಕಾಪಾಡುವಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.

ವೈದ್ಯರ ತಂಡ ವಿವರವಾಗಿಯೇ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಮುಟ್ಟಿನ ಸಂದರ್ಭದಲ್ಲಿ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಹತ್ತಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅರಿವಿನ ಕೊರತೆಯಿಂದಾಗಿ ಬಹುತೇಕ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಹಳೆಯ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಬಟ್ಟೆ ಬದಲಿಗೆ ಈಗ ಸ್ಯಾನಿಟರಿ ಪ್ಯಾಡ್ ಬಳಕೆ ಬಂದಿದ್ದರೂ ಪ್ಯಾಡ್‌ಗಳ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಕ್ಯಾನ್ಸರ್‌ಗೂ ಕಾರಣವಾಗಬಹುದು. ಇನ್ನೊಂದೆಡೆ ಸ್ಯಾನಿಟರಿ ಪ್ಯಾಡ್‌ಗಳು ಪರಿಸರಕ್ಕೂ ಮಾರಕವಾಗಿವೆ. ಆದರೆ ಮುಟ್ಟಿನ ಕಪ್ ಬಳಕೆಯಿಂದ ಯಾವುದೇ ಸಮಸ್ಯೆ ಇಲ್ಲ. ಪುನರ್ ಬಳಕೆ ಮಾಡುವುದರ ಜತೆಗೆ ಹಲವು ತಿಂಗಳು ಬಳಕೆ ಮಾಡಬಹುದು ಎನ್ನುವ ಮಾಹಿತಿ ನೀಡುತ್ತಿದ್ದಾರೆ.

ಜಿಲ್ಲೆಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿನ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 5,968 ವಿದ್ಯಾರ್ಥಿನಿಯರನ್ನು ಗುರುತಿಸಲಾಗಿದೆ. ಅಂತೆಯೇ ಎಲ್ಲರಿಗೂ ಮುಟ್ಟಿನ ಕಪ್ ವಿತರಿಸಲು ಕ್ರಮ ವಹಿಸಲಾಗಿದೆ. ಜಿ.ಪಂ ಸಿಇಒ ಕೆ.ಆರ್.ನಂದಿನಿ ಅವರ ಮನವಿ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ತಮಗೆ ಸಂಪರ್ಕವಿರುವ ಕಂಪನಿಗಳಿಂದ ಸಿಎಸ್‌ಆರ್ ನಿಧಿ ಮೂಲಕ 6000 ಮುಟ್ಟಿನ ಕಪ್‌ಗಳ ಪೂರೈಕೆಗೆ ಒಪ್ಪಿಗೆ ಕೊಡಿಸಿದ್ದಾರೆ.

ಒಟ್ಟಾರೆ ಮಹಿಳಾ ಸಬಲೀಕರಣದ ವಿಷಯದಲ್ಲಿ ಮಹತ್ವದ ಹೆಜ್ಜೆಗಳನ್ನಿಡುತ್ತಿರುವ ಜಿಪಂ ಇದೀಗ ಮತ್ತೊಂದು ಉತ್ತಮ ಯೋಜನೆ ಜಾರಿಗೊಳಿಸುತ್ತಿದೆ. ಮುಟ್ಟಿನ ಕಪ್ ವಿತರಣೆಯಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲ. ಜತೆಗೆ ಪರಿಸರ ಮಾಲಿನ್ಯದ ಆತಂಕವೂ ಇಲ್ಲ.

Ceo-Nandini-Mandya

ಮುಟ್ಟಿನ ಕಪ್ ವಿತರಣೆಗಿಂತಲೂ ಪ್ರಮುಖವಾದುದು ಅದರ ಸದ್ಬಳಕೆ. ಆದ್ದರಿಂದ ಈ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮುಟ್ಟಿನ ಕಪ್ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ. ನಂತರದ ದಿನಗಳಲ್ಲಿ ವಿಜ್ಞಾನ ಶಿಕ್ಷಕರು ಅಥವಾ ಮಹಿಳಾ ಶಿಕ್ಷಕರು ನಿರಂತರ ಅರಿವು ಮೂಡಿಸಬೇಕು. ಪ್ರತಿ ಶಾಲೆಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು. ಅಂತೆಯೇ ಮುಟ್ಟಿನ ಕಪ್ ವಿತರಣೆಯ ನಂತರ ಅರೋಗ್ಯ ಇಲಾಖೆಯ ಎಎನ್‌ಎಂ ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ನಿರಂತರ ಅನುಸರಣೆ ಮಾಡಬೇಕು. ಕೆ.ಆರ್.ನಂದಿನಿ ಜಿಪಂ ಸಿಇಒ ಜಿಪಂ ಸಿಇಒ ಕೆ.ಆರ್.ನಂದಿನಿ ಅವರ ಮಾರ್ಗದರ್ಶನದ ಮೇರೆಗೆ ‘ಮುಟ್ಟಿನ ಕಪ್’ ಬಳಕೆ ಕುರಿತು ವಿದ್ಯಾರ್ಥಿನಿಯರಿಗೆ ನಮ್ಮ ವೈದ್ಯರ ತಂಡ ಜಿಲ್ಲಾದ್ಯಂತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಇದೊಂದು ಮಹತ್ವದ ಹೆಜ್ಜೆ. ‘ಮುಟ್ಟಿನ ಕಪ್’ ಬಳಕೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಇರುವುದಿಲ್ಲ. ಡಾ.ಆರ್.ಮನೋಹರ್ ಜಿಲ್ಲಾಧ್ಯಕ್ಷ ಸ್ತ್ರೀರೋಗ ಮತ್ತು ಪ್ರಸೂತಿ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net