

ಮೈಸೂರು: ರಾಜೀವ್ ಸ್ನೇಹ ಬಳಗ ವತಿಯಿಂದ ಕುವೆಂಪುನಗರದ ಸುಮಸೋಪಾನ ಉದ್ಯಾನದಲ್ಲಿ ಭಾನುವಾರ ಸಾರ್ವಜನಿಕರಿಗೆ ಔಷಧ ಸಸ್ಯಗಳನ್ನು ವಿತರಣೆ ಮಾಡಲಾಯಿತು.
ಕೃಷ್ಣತುಳಸಿ ಗಿಡ, ಮೈಸೂರು ವೀಳ್ಯದೆಲೆ, ಅಮೃತಬಳ್ಳಿ ಗಿಡ, ಇನ್ಸೂಲಿನ್, ಕರಿಬೇವು, ದೊಡ್ಡಪತ್ರೆ, ಲೋಳೆಸರ, ರಣಕಳ್ಳಿ ಗಿಡ, ನಿಂಬೆಗಿಡ, ಪಾರಿಜಾತ, ಕಾಮಕಸ್ತೂರಿ, ದಾಸವಾಳ, ದಾಳಿಂಬೆ, ಆಡುಸೋಗೆ, ಪಪ್ಪಾಯಿ, ಸೀತಾಫಲ, ಸೀಬೆ ಗಿಡಗಳನ್ನು ಸಾರ್ವಜನಿಕರಿಗೆ ನೀಡಲಾಯಿತು.
ಮೇಲುಕೋಟೆಯ ವೆಂಗಿಪುರ ನಂಬಿಮಠದ ಇಳೈ ಆಳ್ವಾರ್ ಮಾತನಾಡಿ, ಗಿಡ ಮರಗಳನ್ನು ಬೆಳೆಸಿದರೆ ಪ್ರತಿಯೊಬ್ಬರ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿಯೊಬ್ಬರು ಮನೆ ಹಾಗೂ ತಮ್ಮ ತೋಟದಲ್ಲಿ ಗಿಡ ಮರಗಳನ್ನು ಬೆಳೆಸುತ್ತಾರೆ. ಆದರೆ, ರಾಜೀವ್ ಸ್ನೇಹ ಬಳಗ ಸಮಾಜದ ಒಳಿತಿಗೋಸ್ಕರ ನಗರದಲ್ಲಿ ಮರ, ಗಿಡಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಮಾತನಾಡಿ, ಅಧಿಕಾರ ಹಾಗೂ ಹಣ ಸಂಪಾದಿಸುವುದು ಸುಲಭ. ಆದರೆ, ಆರೋಗ್ಯವನ್ನು ಸಂಪಾದಿಸುವುದು ಕಷ್ಟ. ಆರೋಗ್ಯ ಇಲ್ಲದೆ ಇದ್ದರೆ ಯಾವುದೇ ಸಂಪತ್ತು ಉಪಯೋಗಕ್ಕೆ ಬರುವುದಿಲ್ಲ ಎಂದು ಹೇಳಿದರು.
ನಗರದ ಜಯದೇವ ಆಸ್ಪತ್ರೆಯ ಹೃದ್ರೋಗತಜ್ಞ ಡಾ. ಸಂತೋಷ್ ಮಾತನಾಡಿ, ನಾವು ಪರಿಸರವನ್ನು ಎಷ್ಟು ಉತ್ತಮವಾಗಿ ಕಾಪಾಡಿಕೊಳ್ಳುತ್ತೇವೆಯೋ ನಮ್ಮ ಆರೋಗ್ಯವೂ ಅಷ್ಟೇ ಉತ್ತಮವಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯ ಕಡೆಗೆ ಗಮನ ಹರಿಸಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ರಾಜೀವ್ ಸ್ನೇಹ ಬಳಗ ಅಧ್ಯಕ್ಷ ಆರ್. ಕುಮಾರ್, ಪತ್ರಕರ್ತರ ಸುಬ್ರಹ್ಮಣ್ಯ ಹಾಗೂ ಇತರರು ಇದ್ದರು.