

ಸೋಮವಾರಪೇಟೆ: ನಟ ದಿ. ಪುನೀತ್ ರಾಜ್‌ಕುಮಾರ್ ಅವರ 4ನೇ ವರ್ಷದ ಸ್ಮರಣೆ ಅಂಗವಾಗಿ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಪಟ್ಟಣದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಇತ್ತೀಚೆಗೆ ಮಧ್ಯಾಹ್ನದ ಊಟ ನೀಡಲಾಯಿತು.
ಬಳಗದ ಅಧ್ಯಕ್ಷ ರವಿಕುಮಾರ್ ಅಬ್ಬೂರುಕಟ್ಟೆ ಅವರ ನೇತೃತ್ವದಲ್ಲಿ ಆಸ್ಪತ್ರೆಯ ಒಳರೋಗಿಗಳಿಗೆ ಮೊಟ್ಟೆ, ಹಣ್ಣು ಸಹಿತ ಊಟ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಕನ್ನಡ ಚಲನಚಿತ್ರ ರಂಗದಲ್ಲಿ ನಟರಾಗಿ ಹೆಸರು ಮಾಡಿದ ಪುನೀತ್ ಅವರು ಹಲವಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಅಗಲಿಕೆಯ ನಂತರವೂ ಅಭಿಮಾನಿಗಳ ಸಂಘದಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಶಿವಪ್ರಕಾಶ್ ಮಾತನಾಡಿ, ಮರಣದ ನಂತರವೂ ಜನಮಾನಸದಲ್ಲಿ ಉಳಿದಿರುವ ಪುನೀತ್ ಅವರ ಸೇವಾ ಕಾರ್ಯವನ್ನು ಸಂಘದ ಮೂಲಕ ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಜಮೀರ್ ಅಹಮ್ಮದ್, ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಮಂಜುಳಾ ಹರೀಶ್, ಸಿಬ್ಬಂದಿ , ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು.