

ಕೊಳ್ಳೇಗಾಲ: ತಾಲೂಕಿನ ಕುಣಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಣಗಳ್ಳಿ ಮತ್ತು ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಐಡಿಬಿಐ ಬ್ಯಾಂಕ್ ಸಿಎಸ್‌ಆರ್ ಫಂಡ್‌ನಿಂದ ಶುಕ್ರವಾರ ಕಲಿಕಾ ಸಾಮಗ್ರಿ ವಿತರಿಸಲಾಯಿತು.
ಗ್ರಾಮೀಣ ವಿದ್ಯಾರ್ಥಿಗಳ ಉನ್ನತೀಕರಣದ ಉದ್ದೇಶದಡಿ ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುಣಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಅಂದಾಜು 1.50 ಲಕ್ಷ ರೂ. ಮೌಲ್ಯದ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್, ಚೇರ್ಸ್, ಪ್ರಿಂಟರ್, ಫ್ಯಾನ್ ಹಾಗೂ ಇನ್ನಿತರ ಉಪಕರಣಗಳನ್ನು ಉಚಿತವಾಗಿ ನೀಡಲಾಯಿತು.
ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಉಮೇಶ್ ಮಾತನಾಡಿ, ಐಡಿಬಿಐ ಬ್ಯಾಂಕ್ ವತಿಯಿಂದ ದೇಶಾದ್ಯಂತ ಸಾಕಷ್ಟು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಶಾಲೆಗೆ ಅಗತ್ಯವಾದ ವಸ್ತುಗಳನ್ನು ವಿತರಿಸುತ್ತಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮೈಸೂರು ಐಡಿಬಿಐ ಡಿಜಿಎಂ ರಾಜಗೋಪಾಲ್, ಕೊಳ್ಳೇಗಾಲ ಐಡಿಬಿಐ ವ್ಯವ ಸ್ಥಾಪಕ ಅರುಣ್ ವಿ ಜಾನ್, ಅಸಿಸ್ಟೆಂಟ್ ಮ್ಯಾನೇಜರ್ ಸಂಜಯ್ ಕುಮಾರ್, ಬ್ಯಾಂಕ್ ಸಿಬ್ಬಂದಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮೈನಾವತಿ, ಸದಸ್ಯರಾದ ರಂಗಸ್ಚಾಮಿ, ಮಾದೇಶ್, ಮಹದೇವಶೆಟ್ಟಿ, ರಾಜೇಶ್ವರಿ, ಶಾಲೆಯ ಹಿರಿಯ ಮುಖ್ಯ ಶಿಕ್ಷಕ ರಾಜಣ್ಣ, ಸಹ ಶಿಕ್ಷಕರು ಇದ್ದರು.