ಬಡವರಿಗೆ ಶೀಘ್ರ ನಿವೇಶನ ಸಹಿತ ಮನೆ ವಿತರಣೆ

MLA Basavraj Shivannanavar
Published on

ಬ್ಯಾಡಗಿ: ಪಟ್ಟಣದ ಅರ್ಹ ಬಡವರನ್ನು ಗುರುತಿಸಿ ನಿವೇಶನ ಸಹಿತ ಮನೆ ವಿತರಣೆಗೆ ಶೀಘ್ರ ಚಾಲನೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಅನರ್ಹರ ಆಯ್ಕೆಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಸ್ಪಷ್ಟಪಡಿಸಿದರು.

ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಆಶ್ರಯ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

10 ವರ್ಷಗಳಿಂದ ನಿವೇಶನ ಹಾಗೂ ಮನೆ ನೀಡುವಂತೆ ಸಾವಿರಾರು ಬಡವರು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕಾಗಿ ಈ ಹಿಂದೆ 10 ಎಕರೆ ಜಮೀನು ಖರೀದಿಸಲಾಗಿದೆ. ಈಗ ಅರ್ಜಿದಾರರ ಸಂಖ್ಯೆ ಹೆಚ್ಚಾಗಿದ್ದು, ಇನ್ನೂ 20 ಎಕರೆ ಅಗತ್ಯವಿದ್ದು, ಖರೀದಿಸಲು ಯತ್ನಿಸುತ್ತಿದ್ದೇವೆ. ಎಲ್ಲ ಅರ್ಹರಿಗೂ ನಿವೇಶನ ವಿತರಿಸಲು ಬದ್ಧವಾಗಿದ್ದೇವೆ. ಇದಕ್ಕಾಗಿ ಆಶ್ರಯ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪುರಸಭೆ ಸದಸ್ಯರು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕಿದೆ ಎಂದರು.

ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಪಟ್ಟಣದಲ್ಲಿನ ಬಡವರಿಗೆ ನಿವೇಶನ ಹಂಚಿಕೆ ಮಾಡಿದ್ದೇನೆೆ. ಆದರೆ, ಅಲ್ಲಿಂದ ಇಲ್ಲಿಯವರೆಗೆ ಮತ್ತೆ ನಿವೇಶನಗಳ ಹಂಚಿಕೆಯಾಗಿಲ್ಲ. ದಶಕ ಕಳೆದರೂ ಈವರೆಗೂ ಹಂಚಿಕೆ ಮಾಡದೇ ಇರುವ ಕಾರಣ ಬಡವರು ಅರ್ಜಿ ಸಲ್ಲಿಸಿ ಸುಸ್ತಾಗಿದ್ದಾರೆ. ಕೂಡಲೇ ಅರ್ಹ ಬಡ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವಂತೆ ಸಮಿತಿ ಸದಸ್ಯರಿಗೆ ಸೂಚಿಸಿದರು.

ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ ಏರೇಶಿಮಿ, ಸಮಿತಿ ಸದಸ್ಯರಾದ ಗಿರೀಶ ಇಂಡಿಮಠ, ಮಜೀದ್ ಮುಲ್ಲಾ, ದುರ್ಗೆಶ ಗೋಣೆಮ್ಮನವರ, ಹನುಮಂತ ಬೊಮ್ಮಲಾಪುರ, ದಾನಪ್ಪ ಚೂರಿ, ರಾಜಣ್ಣ ಕಳ್ಯಾಳ, ಡಾ.ಎ.ಎಂ. ಸೌದಾಗರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net