

ಹುಣಸೂರು: ತಾಲೂಕಿನ ಬಿಲ್ಲೇನಹೊಸಹಳ್ಳಿ ಹಾಡಿಯ 100ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿಗೆ ಬೆಂಗಳೂರಿನ ಐಸಿಐಸಿಐ ಫೌಂಡೇಶನ್ ಸಹಯೋಗದಲ್ಲಿ ಜೇನು ಪೆಟ್ಟಿಗೆಗಳನ್ನು ವಿತರಿಸಲಾಯಿತು.
ಸೋಮವಾರ ಸಂಜೆ ಹಾಡಿಯಲ್ಲಿ ಜೇನುಗೂಡುಗಳು ಮತ್ತು ಜೇನು ವಿತರಿಸಿ ಮಾತನಾಡಿದ ಫೌಂಡೇಶನ್ ವ್ಯವಸ್ಥಾಪಕ ಸತ್ಯಶ್ರೀ, ಕೃಷಿಯ ಉಪಕಸುಬುಗಳ ಪೈಕಿ ಜೇನುಕೃಷಿ ಅತ್ಯಂತ ಲಾಭದಾಯಕ ಮತ್ತು ಪರಿಸರಕ್ಕೆ ಪೂರಕ ಕೃಷಿಯಾಗಿದೆ. ಜೇನು ಸಾಕಣೆ ಮೂಲಕ ಕೃಷಿಕರು ತಮ್ಮ ಜಮೀನಿನಲ್ಲಿರುವ ಗಿಡಮರಗಳಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದರು.
ಜತೆಯಲ್ಲಿ ಜೇನುತುಪ್ಪ ಕೂಡ ಸಮೃದ್ಧವಾಗಿ ಸಿಗಲಿದೆ. ಕಾಡಿನಿಂದ ಹೊರಬಂದಿರುವ ಆದಿವಾಸಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಆರ್ಥಿಕವಾಗಿ ಸದೃಢರಾಗಬೇಕಿದೆ. ಪ್ರಕೃತಿ ಆರಾಧಕರಾಗಿ ಕಾಡಿನಲ್ಲಿ ತಮ್ಮದೇ ಸಂಸ್ಕೃತಿಯೊಂದಿಗೆ ಜೀವಿಸುತ್ತಿದ್ದ ಅವರನ್ನು ಇದೀಗ ಕೃಷಿಯತ್ತ ಆಸಕ್ತಿ ಮೂಡುವಂತೆ ಮಾಡಬೇಕಿದೆ. ಕೃಷಿ ಉಪಕಸುಬುಗಳಾದ ಹೈನುಗಾರಿಕೆ, ಕುರಿ, ಕುಕ್ಕುಟ ಸಾಕಣೆಯಂತೆ ಜೇನುಕೃಷಿಯತ್ತ ಆದಿವಾಸಿಗಳು ಹೆಚ್ಚು ಗಮನಹರಿಸಬೇಕೆಂದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ ಮಾತನಾಡಿ, ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲೂಕಿನ ನೂರಾರು ಆದಿವಾಸಿ ಕುಟುಂಬಗಳಿಗೆ ತಲಾ 4500 ರೂ. ಮೌಲ್ಯದ ಜೇನುಸಾಕಣೆ ಪೆಟ್ಟಿಗೆಯನ್ನು ಐಸಿಐಸಿಐ ಫೌಂಡೇಶನ್ ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಫೌಂಡೇಶನ್‌ನಿಂದ ಇನ್ನಷ್ಟು ಸಹಕಾರ ಪಡೆಯಲಾಗುವುದು ಮಾತ್ರವಲ್ಲದೇ ಜೇನುಕೃಷಿ ಕುರಿತಂತೆ ತರಬೇತಿ ನೀಡುತ್ತಿರುವುದು ಹೆಚ್ಚು ಅನುಕೂಲವಾಗಲಿದೆ ಎಂದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಪ್ರಕಾಶ್, ಶಿವಣ್ಣ ಇತರರು ಇದ್ದರು.