

ತೇರದಾಳ: ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಈ. ಶಾಂತವೀರ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣ ಹೆಚ್ಚಾಗುತ್ತಿವೆ. ಹೊಸ ವರ್ಷದ ಸಂದರ್ಭದಲ್ಲಿ ವಾಟ್ಸ್ ಆ್ಯಪ್‌ನಲ್ಲಿ ಎಪಿಕೆ ಆಧಾರಿತ ವಿಶ್ ಫೈಲ್‌ಗಳು ಬಂದರೆ ಕ್ಲಿಕ್ ಮಾಡಬೇಡಿ. ಕ್ಲಿಕ್ ಮಾಡಿದರೆ ಒಂದು ಗಂಟೆಯೊಳಗೆ 1930 ನಂಬರ್‌ಗೆ ಕರೆ ಮಾಡಬೇಕು. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಗ್ರಾಮ ವಾಸ್ತವ್ಯ ಮತ್ತು ಚೆಕ್ ಪೋಸ್ಟ್ ಅಳವಡಿಕೆ ಯಶಸ್ವಿಯಾಗಿದೆ. ತೇರದಾಳ ಪಟ್ಟಣದಲ್ಲಿ ಭಾವೈಕ್ಯ ಸಹಜೀವನ ಕಾಣುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಸಿಪಿಐ ಸಂಜೀವ ಬಳಗಾರ ಮಾತನಾಡಿ, ಮಾಸಾಚರಣೆ ಮೂಲಕ ಜನರಿಗೆ ಕಾನೂನಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಪಘಾತದಲ್ಲಿ ಜೀವಹಾನಿ ತಡೆಯಲು ಹೆಲ್ಮೆಟ್ ಬಳಸಬೇಕು ಎಂದರು.
ಪಿಎಸ್‌ಐ ಅಪ್ಪು ಐಗಳಿ ಮಾತನಾಡಿ, ತೇರದಾಳ ಠಾಣಾ ವ್ಯಾಪ್ತಿಯಲ್ಲಿ ಪ್ರತಿವರ್ಷ ರಸ್ತೆ ಅಪಘಾತದಲ್ಲಿ 10ರಿಂದ 15 ಸಾವು ಸಂಭವಿಸುತ್ತವೆ. ಈ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದರು.
ಗೌತಮ ರೋಡಕರ, ಪ್ರಭು ಗಸ್ತಿ, ರಾಜು ನಂದೆಪ್ಪನವರ, ಶಂಕರ ಕುಂಬಾರ, ಪಿ.ಎಸ್. ಮಾಸ್ತಿ, ದಯಾನಂದ ಕಾಳೆ, ಧನಪಾಲ ಬೋದೆನ್ನವರ, ಅಲ್ಲಾಭಕ್ಷ ಅಲಾಸ್ ಮತ್ತಿತರರಿದ್ದರು.
ಹಳಿಂಗಳಿ ಗ್ರಾಮ ಪಂಚಾಯಿತಿ ಅವರು ನೀಡಿದ 32ಹೆಲ್ಮೆಟ್‌ಗಳನ್ನು ಡಿವೈಎಸ್‌ಪಿ ಈ. ಶಾಂತವೀರ ಹಾಗೂ ಹಳಿಂಗಳಿ ಮುಖಂಡ ರಾಜು ನಂದೆಪ್ಪನವರ ಪೊಲೀಸ್ ಸಿಬ್ಬಂದಿಗೆ ವಿತರಿಸಿದರು. ಡಿವೈಎಸ್ಪಿ ನೇತತ್ವದಲ್ಲಿ ಪೊಲೀಸರು ಹೊಸ ಹೆಲ್ಮೆಟ್ ಧರಿಸಿ ಬೈಕ್ ಮೇಲೆ ಸಂಚರಿಸಿ ಜಾಗೃತಿ ಮೂಡಿಸಿದರು.