

ಗಂಗಾವತಿ: ಮುಜರಾಯಿ ಇಲಾಖೆಗೆ ಒಳಪಡುವ ಪ್ರತಿಷ್ಠಿತ ದೇವಾಲಯಗಳಿಗೆ ಪ್ರತಿವರ್ಷ ಶಿವರಾತ್ರಿಯಂದು ಗಂಗಾಜಲ ವಿತರಿಸಲಾಗುತ್ತಿದ್ದು, ಕಂದಾಯ ನಿರೀಕ್ಷಕರ ಮೂಲಕ ತಲುಪಿಸಲಾಗುವುದು ಎಂದು ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ ಹೇಳಿದರು.
ನಗರದ ತಾಲೂಕಾಡಳಿತ ಸೌಧದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯಿಂದ ಪೂರೈಕೆಯಾದ ಗಂಗಾಜಲವನ್ನು ಮಂಗಳವಾರ ದೇವಾಲಯಗಳಿಗೆ ವಿತರಿಸಿ ಮಾತನಾಡಿದರು. ಜಿಲ್ಲಾಡಳಿತ ಭವನದಿಂದ ಬಂದಿದ್ದ ಗಂಗಾಜಲವನ್ನು ವಿಶೇಷ ಪೂಜೆ ಸಲ್ಲಿಸಿ ವಿತರಿಸಲಾಯಿತು. ಗಂಗಾಜಲ ವಿತರಿಸುವ ಉದ್ದೇಶ ಮತ್ತು ಮುಜರಾಯಿ ಇಲಾಖೆಯಿಂದ ಹಮ್ಮಿಕೊಳ್ಳುವ ಶಿವರಾತ್ರಿ ವಿಶೇಷ ಪೂಜೆ ಕುರಿತು ಮಾಹಿತಿ ನೀಡಿದರು.
ಉಪತಹಸೀಲ್ದಾರರಾದ ಕೃಷ್ಣವೇಣಿ, ಪ್ರಕಾಶ ನಾಯಕ, ಮಹೆಬೂಬ್‌ಅಲಿ, ಶಿರಸ್ತೇದಾರರಾದ ಶ್ರೀಕಂಠೇಶ, ಅನ್ನಪೂರ್ಣಾ, ಗುರುರಾಜ್, ಎಂ.ಡಿ.ರಫಿ, ಶ್ರೀರಾಮ್‌ಜೋಶಿ, ಕಂದಾಯ ನಿರೀಕ್ಷಕರಾದ ಎಸ್.ಬಷೀರುದ್ದೀನ್, ಮಹೇಶ ದಲಾಲ್, ವಿಎ ಚನ್ನಪ್ಪ ಇತರರಿದ್ದರು.
ನಗರೇಶ್ವರ ದೇಗಲ: ನಗರದ ನಗರೇಶ್ವರ ದೇವಾಲಯದಲ್ಲಿ ಆರ್ಯವೈಶ್ಯ ಸಮಾಜದಿಂದ ಶಿವರಾತ್ರಿ ನಿಮಿತ್ತ ಸಾರ್ವಜನಿಕರಿಗೆ ಗಂಗಾಜಲ ವಿತರಿಸಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಿರಂತರ ಭಜನೆ, ಪಲ್ಲಕ್ಕಿ ಉತ್ಸವ ಮತ್ತು ಶಿವಸ್ತುತಿ ಪಾರಾಯಣ ಆಯೋಜಿಸಲಾಗುವುದು ಎಂದು ದೇವಾಲಯದ ಅರ್ಚಕ ದಿಗಂಬರ್ ಭಟ್ ಜೋಶಿ ಹೇಳಿದರು.
ಶಿವರಾತ್ರಿಯಲ್ಲಿ ಗಂಗಾಜಲ ಶ್ರೇಷ್ಠತೆ ಕುರಿತು ಸಮಾಜದ ತಾಲೂಕಾಧ್ಯಕ್ಷೆ ರೂಪಾರಾಣಿ ರಾಯಚೂರು ಮಾತನಾಡಿದರು. ಕಾರ್ಯದರ್ಶಿ ಸಿ.ಈಶ್ವರ ಶ್ರೇಷ್ಟಿ, ಪದಾಧಿಕಾರಿಗಳಾದ ಸುರೇಶ ಶ್ರೇಷ್ಟಿ, ಮಾರುತಿ ಪ್ರಸಾದ, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಭಾಗ್ಯಾ ಈಶ್ವರ ಶ್ರೇಷ್ಟಿ, ಸದಸ್ಯೆ ಶೋಭಾರಾಣಿ ಇತರರಿದ್ದರು.