

ಬದಿಯಡ್ಕ: ಶ್ರೀ ಸತ್ಯಸಾಯಿಬಾಬಾ ಅವರ 99ನೇ ಜನ್ಮದಿನಾಚರಣೆ ಕಾರ್ಯಕ್ರಮ ಶನಿವಾರ ಕಿಳಿಂಗಾರು ಸಾಯಿಮಂದಿರದಲ್ಲಿ ಜರುಗಿತು. ಕೊಡುಗೈದಾನಿ ಸಾಯಿರಾಂ ಕೃಷ್ಣ ಭಟ್ ನೇತೃತ್ವದಲ್ಲಿ ಬೆಳಗ್ಗೆ ಭಜನೆ, ಮಧ್ಯಾಹ್ನ ಪೂಜೆ ನಡೆಯಿತು. ನಡೆದ ಸಭಾ ಕಾರ್ಯಕ್ರಮದಲ್ಲಿ ಬಡಜನತೆಗೆ ಟೈಲರಿಂಗ್ ಯಂತ್ರ, ವಿದ್ಯಾಭ್ಯಾಸ, ಚಿಕಿತ್ಸೆಗೆ ವಿವಿಧ ಲಾನುಭವಿಗಳಿಗೆ ಧನಸಹಾಯ ವಿತರಿಸಲಾಯಿತು.
ಕುಂಬಳೆ ಸಿಐ ವಿನೋದ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಬಡಜನರ ಕಣ್ಣೀರೊರೆಸುವ ಕಾರ್ಯ ಪುಣ್ಯದ ಕೆಲಸವಾಗಿದೆ. ಇಂತಹ ಕಾರ್ಯಗಳಲ್ಲಿ ನಿರಂತರ ತೊಡಗಿಸಿಕೊಂಡಿರುವ ಕೃಷ್ಣ ಭಟ್ ತನ್ನ ತಂದೆಯ ಸೇವಾಕಾರ್ಯ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ಬದಿಯಡ್ಕ ಗ್ರಾಪಂ ಉಪಾಧ್ಯಕ್ಷ ಎಂ.ಅಬ್ಬಾಸ್, ಸದಸ್ಯ ಶಂಕರ ಡಿ., ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮೊಳೆಯಾರು, ಸಾಮಾಜಿಕ ಮುಖಂಡ ರಾಮಪ್ಪ ಮಂಜೇಶ್ವರ, ಉದನೇಶ್ವರ ಭಟ್ ಅಳಿಕೆ, ಬಿ.ವಿಷ್ಣು ಭಟ್ ಪಾಲಾರು, ರಘುನಾಥ ಪೈ ಕುಂಬಳೆ ಉಪಸ್ಥಿತರಿದ್ದರು. ಲಾನುಭವಿಗಳಾದ ದುರ್ಗಾಶ್ರೀ ಕರೋಪಾಡಿ, ಜಯಲಕ್ಷ್ಮೀ ಸೂರಂಬೈಲು, ಸುಜಾತ ನಾಯ್ಕಪು, ಶರಣ್ಯಾ ಬೇಳ, ಪುಷ್ಪಲತಾ ದೇಲಂಪಾಡಿ, ಹರಿಪ್ರಿಯಾ ಮಜಿರ್ಪಳ್ಳಕಟ್ಟೆ ಅವರಿಗೆ ಹೊಲಿಗೆ ಯಂತ್ರಕ್ಕೆ ಧನಸಹಾಯ ನೀಡಲಾಯಿತು.
ವಿದ್ಯಾಭ್ಯಾಸಕ್ಕಾಗಿ ಸುಜಾತ ಮಾನ್ಯ, ಕೃಷ್ಣ ಕುಂಡಂಗುಳಿ ಅವರಿಗೆ ಚಿಕಿತ್ಸಾ ಧನಸಹಾಯ ವಿತರಿಸಲಾಯಿತು. ಸಾಯಿರಾಂ ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವೇಣುಗೋಪಾಲ ಕೆ.ಎನ್. ವಂದಿಸಿದರು. ಊರಪರವೂರ ಅಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.