

ವಿಜಯವಾಣಿ ಸುದ್ದಿಜಾಲ ಗೋಳಿಯಂಗಡಿ
ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಕೊಡುಗೆ ನೀಡುವ ಕುಡುಬಿ ಯುವ ಸಂಘಟನೆಗಳ ಕಾರ್ಯ ಶ್ಲಾಘನೀಯ. ಜೀವನದಲ್ಲಿ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಿಸಿಕೊಳ್ಳಬೇಕು ಎಂದು ರಾಜ್ಯ ಕುಡುಬಿ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ ಗೋಳಿಯಂಗಡಿ ಹೇಳಿದರು.
ಹೆಂಗವಳ್ಳಿ ತೊಂಬತ್ತು ಶ್ರೀ ಮಲ್ಲಿಕಾರ್ಜುನ ಕುಡುಬಿ ಯುವ ಸಂಘಟನೆ ದಶಮಾನೋತ್ಸವ ಪ್ರಯುಕ್ತ ತೊಂಬತ್ತು ವ್ಯಾಪ್ತಿಯ ಕುಡುಬಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಕುಡುಬಿ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಪ್ರಭಾಕರ ನಾಯ್ಕ ಕಲ್ಮರ್ಗಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಆತ್ಮಸ್ಥೈರ್ಯ, ಛಲ, ಸಾಧನೆಯ ಗುರಿಯೊಂದಿಗೆ ಯಶಸ್ಸು ಗಳಿಸಬೇಕು. ಕುಡುಬಿ ಯುವ ಸಂಘಟನೆಗಳು ಸಮುದಾಯದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡು ಗುರುತಿಸಿಕೊಳ್ಳಬೇಕು ಎಂದರು.
ಹೆಂಗವಳ್ಳಿ ತೊಂಬತ್ತು ಶ್ರೀ ಮಲ್ಲಿಕಾರ್ಜುನ ಕುಡುಬಿ ಯುವ ಸಂಘಟನೆ ಅಧ್ಯಕ್ಷ ಕಾಳು ನಾಯ್ಕ ಎಲ್ಸೆಮನೆ ಅಧ್ಯಕ್ಷತೆ ವಹಿಸಿದರು. ಉಡುಪಿ ಜಿಲ್ಲಾ ಕುಡುಬಿ ಯುವ ಸಂಘಟನೆ ಅಧ್ಯಕ್ಷ ಚಂದ್ರ ನಾಯ್ಕ ನರಿಕೊಡ್ಲು, ತೊಂಬತ್ತು ಹೋಳಿ ಕೂಡುಕಟ್ಟು ಗುರಿಕಾರ ನಾಗರಾಜ ನಾಯ್ಕ ತೊಂಬತ್ತು, ತೊಂಬತ್ತು ಶ್ರೀ ಮಲ್ಲಿಕಾರ್ಜುನ ಕುಡುಬಿ ಯುವ ಸಂಘಟನೆ ಕಾರ್ಯದರ್ಶಿ ವಿಜಯ ನಾಯ್ಕ ಕಲ್ಲುಗುಂಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾ, ರಾಜಶ್ರೀ ಪ್ರಾರ್ಥಿಸಿದರು. ಶರತ್ ನಾಯ್ಕ ಹೆಂಗವಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರವಿ ನಾಯ್ಕ ಕಲ್ಲುಗುಂಡಿ ವಂದಿಸಿದರು.