

ರಾಯಚೂರು ಮಕ್ಕಳಲ್ಲಿ ಶಿಕ್ಷಣ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಸಂಘ, ಸಂಸ್ಥೆಗಳು, ಸರ್ಕಾರ ಜಾಗೃತಿ ಮೂಡಿಸುವಂತಹ ಕೆಲಸಗಳನ್ನು ನಿರಂತರವಾಗಿ ಮಾಡಬೇಕೆಂದು ರೋಟರಿ ಕ್ಲಬ್ ಸೆಂಟ್ರಲ್‌ನ ಅಧ್ಯಕ್ಷ ಡಾ. ಶರಣಬಸವ ಪಾಟೀಲ್ ಜೋಳದಹೆಡಗೆ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಕಲಾ ಸಂಕುಲ ಸಂಸ್ಥೆಯಿಂದ ಮಕ್ಕಳ ನೃತ್ಯೋತ್ಸವ ಹಾಗೂ ಬಡ ಸ್ಲಂನ ಚಿಂದಿ ಆಯುವ ಮಕ್ಕಳಿಗೆ ಆರೋಗ್ಯ ಮತ್ತು ಶಿಕ್ಷಣ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಕಲಾ ಸಂಕುಲ ಸಂಸ್ಥೆ 100 ಬಡ ಮಕ್ಕಳಿಗೆ ಕಿಟ್ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯವಾಗಿದೆ. ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿದ್ದಾರೆ.
ಜಿಲ್ಲೆಯು ರಾಜ್ಯದಲ್ಲಿ ಅತಿ ಹಿಂದುಳಿದಿದೆ ಈ ದೃಷ್ಟಿಯಿಂದ ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಗಂಭೀರವಾಗಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಿದೆ. ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ನೀಡಬೇಕಾಗಿದೆ ಬಡತನದಿಂದ ಬಂದ ಮಕ್ಕಳು ಶಿಕ್ಷಣ ಕಲಿಯುವಲ್ಲಿ ಹಿಂದೇಟು ಹಾಕು ವಂತ ಸ್ಥಿತಿ ನಿರ್ಮಾಣವಾಗಿದೆ ಎಂದರು.
ನಂತರ ನಗರದ ಅಲ್ಲಮಪ್ರಭು ಕಾಲೋನಿಯಲ್ಲಿರುವ ಚಿಂದಿ ಆಯುವ ಬಡ ಕುಟುಂಬದ ಮಕ್ಕಳಿಗೆ ಹಾಗೂ ತಾಲೂಕಿನ ವಡವಾಟಿ,ಯಕ್ಲಾಸ್‌ಪುರ, ಆಶಾಪೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಆರೋಗ್ಯ ಹಾಗೂ ಶಿಕ್ಷಣ ಕಿಟ್‌ಗಳನ್ನು ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಲಾಸಂಕುಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್, ಶೋಭಾ ಯಾದವ್, ಸುರೇಖಾ ಉಪ್ಪಾರ್. ದಂಡಪ್ಪ ಬಿರಾದಾರ್, ಪ್ರಸನ್ನ ಹಡಗಲಿ, ಡಾ.ಫಾತಿಮಾ ಹುಸೇನ್ ಸೇರಿ ಅನೇಕರು ಇದ್ದರು.