

ಆನೇಕಲ್: ಪತ್ರಿಕೆ ಹಂಚುವ ಹುಡುಗರು ಕರೊನಾ ಸೋಂಕು ನಡುವೆಯೂ ಕಷ್ಟಪಟ್ಟು ದುಡಿಯುತ್ತಿದ್ದಾರೆ ಎಂದು ಜಿಗಣಿ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್ ಹೇಳಿದರು.
ಜಿಗಣಿಯಲ್ಲಿ ಆನೇಕಲ್ ತಾಲೂಕು ಪತ್ರಿಕಾ ವಿತರಕರಿಗೆ ಹಾಗೂ ಪತ್ರಿಕೆ ಹಂಚುವವರಿಗೆ ಮಂಗಳವಾರ ಆಹಾರಧಾನ್ಯ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಜಿಗಣಿ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಆಹಾರ ಧಾನ್ಯದ ಕಿಟ್ ವಿತರಣೆ ಮಾಡಲಾಗಿದೆ. ಇದಕ್ಕೆ ಹಲವಾರು ಕಂಪನಿಗಳು ಹಾಗೂ ಕಾರ್ಖಾನೆಗಳು ಸಹಕಾರ ನೀಡಿವೆ. ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ್ದು, ಪ್ರತಿದಿನ ಎರಡು ಸಮಯದಲ್ಲಿ 80 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಸ್ಥಳೀಯರಾದ ಗಿರೀಶ್ ಮಾತನಾಡಿ, ನೂರಾರು ಯುವಕರು ಇನ್‌ಸ್ಪೆಕ್ಟರ್ ವಿಶ್ವನಾಥ್ ಕಾರ್ಯಕ್ಕೆ ಸಹಕಾರ ನೀಡಿದ್ದು, ಅಗತ್ಯವಿರುವೆಡೆ ಊಟ, ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸ್ಥಳೀಯರಾದ ಪ್ರವೀಣ್, ನಾಗರಾಜು, ನಾಗೇಶ್, ಪ್ರದೀಪ್, ಬುಕ್ಕಸಾಗರ ನಟರಾಜ್, ಪತ್ರಿಕೆ ವಿತರಕರಾದ ರಾಜಶೇಖರ್, ಬನ್ನೇರುಘಟ್ಟ ವಜ್ರವೇಲು, ಜಿಗಣಿಯ ಕೃಷ್ಣ, ದೊಮ್ಮಸಂದ್ರದ ಮುನಿಯಪ್ಪ, ಆನೇಕಲ್ ಅಂಬರೀಷ್, ಶರತ್, ಮತ್ತಿತರರು ಹಾಜರಿದ್ದರು.