ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

9
Published on

ಮೈಸೂರು: ಜಿಲ್ಲೆಯ 2860 ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.

ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ನೂರು ಅಂಗನವಾಡಿ ಕಾರ್ಯಕರ್ತೆಯರಿಗೆ 5 ಕೆ.ಜಿ.ಅಕ್ಕಿ, ಉಪ್ಪು, ಎಣ್ಣೆ ಒಳಗೊಂಡ ಕಿಟ್‌ಅನ್ನು ವಿತರಿಸಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಕಾಳಜಿ ವಹಿಸಿ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಪರಿಗಣಿಸಿ ಆಹಾರ ಕಿಟ್ ವಿತರಿಸಲು ಕ್ರಮ ತೆಗೆದುಕೊಂಡಿರುವುದು ಶ್ಲಾಘನೀಯ ಎಂದರು.

ಮೃಗಾಲಯ ನಿರ್ವಹಣೆಗೆಂದು ತಮ್ಮ ಆಪ್ತರು, ಕ್ಷೇತ್ರದ ಜನತೆ ಹಾಗೂ ಜನಪ್ರತಿನಿಧಿಗಳಿಂದ 2.85 ಕೋಟಿ ರೂಪಾಯಿ ದೇಣಿಗೆಯನ್ನು ಸಚಿವರು ಸಂಗ್ರಹಿಸಿ ಕೊಟ್ಟಿದ್ದಾರೆ. ಇದು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆ ಭಾಗ್ಯ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಮಾಹಿತಿ ಕಲೆ ಹಾಕಿದ್ದಲ್ಲದೆ, ಬಿಸಿಲಿದ್ದರೂ ಆಹಾರ ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ತಲುಪಿಸಿದ್ದಾರೆ. ಈ ಕಾರ್ಯವನ್ನು ಜಿಲ್ಲಾಡಳಿತ ಗುರುತಿಸಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಹಸಿರು ಮೈಸೂರು ಸಂಘಟನೆ ಅಧ್ಯಕ್ಷ ಎಚ್.ವಿ.ರಾಜೀವ್ ಇತರರಿದ್ದರು.

ಕಾರ್ಯಕ್ರಮದ ಬಳಿಕ ಕಲಾಮಂದಿರ ಆವರಣದಲ್ಲಿ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಹಸಿರೀಕರಣಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net