ಓಣಂ ಹಬ್ಬದ ಪ್ರಯುಕ್ತ ವೃದ್ಧಾಶ್ರಮಕ್ಕೆ ಊಟ, ವಸ್ತ್ರ ವಿತರಣೆ

12 vpt 2.1
ವಿರಾಜಪೇಟೆ ಹಿಂದು-ಮಲೆಯಾಳಿ ಸಮಾಜದ ವತಿಯಿಂದ ಹೆಗ್ಗಳದ ಸ್ನೇಹ ಭವನ ಅನಾಥಾಶ್ರಮ ಹಾಗೂ ಹೆಗ್ಗಳದ ವೃದ್ಧಾಶ್ರಮದಲ್ಲಿ ಓಣಂ ಪ್ರಯುಕ್ತ ವಿಶೇಷ ಭೋಜನ ಹಾಗೂ ವಸ್ತ್ರವನ್ನು ನೀಡಲಾಯಿತು. ಸುಮೇಶ್, ಜೋಸೆಫ್ ಇದ್ದರು.
Published on

ವಿರಾಜಪೇಟೆ: ಕೇರಳಿಗರ ಪ್ರಮುಖ ಹಬ್ಬಗಳಲ್ಲಿ ಒಂದಾದ ಓಣಂ ಹಬ್ಬದ ಪ್ರಯುಕ್ತ ವೃದ್ಧಾಶ್ರಮದ ವೃದ್ಧರಿಗಾಗಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜವು ಓಣಂ ಸದ್ಯ (ವಿಶೇಷ ಭೋಜನ) ಮತ್ತು ಓಣಂ ಕೊಡಿ(ಹೊಸ ವಸ್ತ್ರ) ವಿತರಣೆ ಮಾಡಲಾಯಿತು.

ಶ್ರೀ ಮುತ್ತಪ್ಪ ಮಲಯಾಳಿ ಸಮಾಜ ವಿರಾಜಪೇಟೆ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಹೆಗ್ಗಳ ನಿರ್ಮಲಗಿರಿ ಸ್ನೇಹ ಭವನದಲ್ಲಿ ಆಶ್ರಯ ಪಡೆದಿರುವ ವೃದ್ಧರು ಮತ್ತು ಎಸ್.ಎಚ್.ಕಾನ್ವೆಂಟ್‌ನ ಮಹಿಳಾ ವೃದ್ಧಾಶ್ರಮದ ವೃದ್ಧೆಯರಿಗಾಗಿ ಓಣಂ ಸದ್ಯ ( ವಿಶೇಷ ಭೋಜನ) ಮತ್ತು ಮಹಿಳಾ ಘಟಕದ ವತಿಯಿಂದ ಓಣಂ ಕೊಡಿ( ಹೊಸ ವಸ್ತ್ರ)ಯನ್ನು ವೃದ್ಧೆಯರಿಗೆ ಬುಧವಾರ ನೀಡಲಾಯಿತು.

ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ.ಸುಮೇಶ್ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ನಾವು ದುಡಿಯುತ್ತೇವೆ ಮತ್ತು ಗಳಿಸುತ್ತೇವೆ. ಹೀಗೆ ಗಳಿಸಿದ್ದನ್ನು ಸಮಾಜಕ್ಕೆ ಹಿಂದಿರುಗಿಸುವ ಕಾರ್ಯವಾಗಬೇಕು. ನಾವು ಮಾಡುವ ಸತ್ಕಾರ್ಯಗಳಿಂದ ಪರಮಾತ್ಮ ಸಂತೃಪ್ತಿಯಾಗುತ್ತಾನೆ. ಈ ನಿಟ್ಟಿನಲ್ಲಿ ಸಂಸ್ಥೆಯು 16ನೇ ವರ್ಷದ ಓಣಂ ಹಬ್ಬದ ಆಚರಣೆಯ ಅಂಗವಾಗಿ ವೃದ್ಧಾಶ್ರಮದಲ್ಲಿ ವಾಸ ಮಾಡುವ ವೃದ್ಧರಿಗಾಗಿ ಓಣಂ ಸದ್ಯವನ್ನು ಹಮ್ಮಿಕೊಂಡಿದ್ದೇವೆ. ಇದಲ್ಲದೆ ಸುಮಾರು 50 ಜನರಿಗೆ ಆಹಾರ ಪದಾರ್ಥಗಳನ್ನು ಒಂದೆಡೆ ಯಿಂದ ಮತ್ತೊಂದೆಡೆಗೆ ಸಾಗಿಸಲು ಸುಲಭವಾಗಲೇಂದು 15 ಸಾವಿರ ರೂ. ವೆಚ್ಚದ ಊಟದ ಡಬ್ಬಿಯನ್ನು ವೃದ್ಧಾಶ್ರಮಕ್ಕೆ ಉಚಿತವಾಗಿ ನೀಡಿದ್ದೇವೆ ಎಂದರು.

ಹೆಗ್ಗಳ ಎಸ್.ಎಚ್. ಧರ್ಮಕೇಂದ್ರದ ಧರ್ಮಗುರು ರೆ.ಫಾ. ಜೋಸೆಫ್ ಪುದುಚೇರಿ ಅವರು ವೃದ್ಧೆಯರಿಗೆ ಹೊಸ ವಸ್ತ್ರ ವಿತರಿಸಿ ಮಾತನಾಡಿ, ಹಬ್ಬಗಳ ಆಚರಣೆಗಳು ಮನೆ, ಕುಟುಂಬಕ್ಕೆ ಮಾತ್ರ ಸೀಮಿತವಾಗದೆ ಸಮಾಜಕ್ಕೆ ಒಳಿತು ಮಾಡುವ ರೀತಿಯಲ್ಲಿ ಆಚರಣೆಯಾಗಬೇಕು. ಈ ನಿಟ್ಟಿನಲ್ಲಿ ಮಲಯಾಳಿ ಸಮಾಜವು ಓಣಂ ಹಬ್ಬದ ಪ್ರಯುಕ್ತ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ವೃದ್ಧಾಶ್ರಮಕ್ಕೆ ನಿರಂತರವಾಗಿ ವಿವಿಧ ರೀತಿಯಲ್ಲಿ ತನ್ನ ಸಾಮಾಜಿಕ ಕಳಕಳಿ ಮುಂದುವರಿಸಿದೆ. ಮಲಯಾಳಿ ಸಮಾಜದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹೇಳಿದರು.
ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ, ಸದಸ್ಯರು, ಮಹಿಳಾ ಘಟಕದ ಸದಸ್ಯೆಯರು ಹಾಗೂ ಸ್ನೇಹ ಭವನ್ ವೃದ್ಧಾಶ್ರಮದ ಆಡಳಿತ ಮಂಡಳಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net