ಕಸಾಯಿ ಖಾನೆಯಲ್ಲಿ ಹರಿಯುತ್ತಿದೆ ಗೋವಿನ ರಕ್ತ: ಕಿಸಾನ್ ಸಂಘದ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಬೇಸರ

Distribution of fodder to cows Mandya
Published on

ಮಂಡ್ಯ: ನಾವೆಲ್ಲ ತಾಯಿಯಂತೆ ಪೂಜಿಸುವ ಗೋಮಾತೆಯ ರಕ್ತ ಕಸಾಯಿ ಖಾನೆಗಳಲ್ಲಿ ಹರಿಯುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಸಂಘದ ವತಿಯಿಂದ ನಗರದ ರೈಲು ನಿಲ್ದಾಣದ ಸಮೀಪವಿರುವ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ನಂದಗೋಕುಲ ಗೋಶಾಲೆ, ಮೇಲುಕೋಟೆಯಲ್ಲಿರುವ ಗೋವುಗಳಿಗೆ ಮೇವು ವಿತರಿಸಿ ಮಾತನಾಡಿದರು ಅವರು, ತಾಯಿಯ ಹಾಲನ್ನು ನಾವು ಕೇವಲ 9 ರಿಂದ ಒಂದು ವರ್ಷ ಕುಡಿಯುತ್ತೇವೆ. ಆದರೆ, ಗೋಮಾತೆಯ ಹಾಲನ್ನು ಜೀವನ ಪರ್ಯಂತ ಕುಡಿಯುತ್ತೇವೆ. ಇದರಿಂದಲೇ ಅದಕ್ಕೆ ಗೋಮಾತೆ ಎಂದು ಪೂರ್ವಿಕರು ಕರೆದಿದಾರೆ. ಆದ್ದರಿಂದ ನಾವು ಪೂಜಿಸುತ್ತೇವೆ ಎಂದು ಹೇಳಿದರು.

ಇಂತಹ ಪೂಜನೀಯ ಸ್ಥಾನದಲ್ಲಿರುವ ಗೋಮಾತೆಯನ್ನು ಕಸಾಯಿಖಾನೆಗಳಿಗೆ ಅಟ್ಟಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ 300 ಕಸಾಯಿಖಾನೆಗಳಿದ್ದವು. ಆದರೆ ಇಂದು 3 ಲಕ್ಷ ಕಸಾಯಿಖಾನೆಗಳಿವೆ. ಅದರಲ್ಲಿ ನಿತ್ಯವೂ ಗೋಮಾತೆಯ ರಕ್ತ ಹರಿಯುತ್ತಿದೆ. ಮುಕ್ಕೋಟಿ ದೇವರು ಗೋವಿನಲ್ಲಿ ವಾಸ ಮಾಡುತ್ತಾರೆಂದು ನಂಬಲಾಗಿದೆ. ಇಂತಹ ಗೋಮಾತೆಯ ಹಾಲು, ಸಗಣಿ, ಗಂಜಲವನ್ನು ಉಪಯೋಗಿಸಿಕೊಂಡು ಕೃಷಿ ಚಟುವಟಿಕೆ ಮಾಡುತ್ತಿದ್ದೆವು. ಆದರೆ ಇಂದು ಗೋವಿನ ಸಂತತಿ ಕಡಿಮೆಯಾಗುತ್ತಿದೆ. ಪರಿಣಾಮ ಭೂಮಿ ತನ್ನ ಫಲವತ್ತತೆಯನ್ನೂ ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗೋಮಯಗಳನ್ನು ಭೂಮಿಗೆ ಹಾಕುವುದನ್ನು ಬಿಟ್ಟು ಭೂಮಿಗೆ ವಿಷವನ್ನು ಹಾಕುತ್ತಿದ್ದೇವೆ. ಇದರಿಂದ ಬೆಳೆಯೂ ವಿಷಯವಾಗುತ್ತಿದೆ. ವಿಷಭರಿತ ಆಹಾರವನ್ನು ತಿನ್ನುತ್ತಿದ್ದೇವೆ. ಪರಿಣಾಮ ಕ್ಯಾನ್ಸರ್ ರೋಗ ಮನುಕುಲವನ್ನು ಕಾಡುತ್ತಿದೆ. ಇದು ಹೀಗೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಮನೆ ಮನೆಗೂ ಕ್ಯಾನ್ಸರ್‌ನಂತಹ ಹೆಮ್ಮಾರಿ ಕಾಲಿಡುವುದರಲ್ಲಿ ಯಾವುದೇ ಅನುಮಾನವೂ ಇಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಹಿಂದೆಲ್ಲ ಎಷ್ಟು ಗೋವುಗಳಿವೆ. ಎಷ್ಟು ದೊಡ್ಡ ಹುಲ್ಲಿನ ಬಣವೆಗಳಿವೆ. ಯಾವ ಪ್ರಮಾಣದ ತಿಪ್ಪೆ ಇದೆ ಎಂದು ಅಳೆದು ನೋಡಿ ಹೆಣ್ಣು ಕೊಡುವಂತಹ ಸಂಸ್ಕೃತಿ ಇತ್ತು. ಆದರೀಗ ಎಲ್ಲವೂ ಮರೆಯಾಗಿದೆ. ಇನ್ನು ಮುಂದಾದರೂ ರೈತರು ಮನೆಗೊಂದು ಗೋವನ್ನು ಸಾಕುವ ಮೂಲಕ ತಮ್ಮ ಭೂಮಿಯನ್ನೂ ಫಲಭರಿತವನ್ನಾಗಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, 108 ಅಡಿ ಮಾರುತಿ ಪ್ರತಿಮೆ ನಿರ್ಮಾಣ ಸಮಿತಿಯ ಮಾದೇಗೌಡ, ಗೋಕುಲ ಶಾಲೆ ಸಂಸ್ಥಾಪಕ ಗಂಗಾನಾಥ್‌ಪ್ರಭು, ಅಭಿಮಾನಿ ಸಂಘದ ಅಧ್ಯಕ್ಷ ಕೃಷ್ಣ ಎನ್.ಗೌಡ, ರಾ.ಸಿ.ಸಿದ್ದರಾಜುಗೌಡ, ನಿತ್ಯಾನಂದ, ಶಿವಕುಮಾರ್, ಅರವಿಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net