

ಮಡಿಕೇರಿ: ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಮಡಿಕೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿಯ ಕಸಬಾ ವೃತ್ತ ಮತ್ತು ಚರಂಬಾಣೆ ವೃತ್ತಕ್ಕೆ ಸಂಬಂಧಿಸಿದ ೫೨ ಅಂಗನವಾಡಿ ಕೇಂದ್ರಗಳಿಗೆ ಪ್ರಥಮ ಚಿಕಿತ್ಸೆ ಬಾಕ್ಸ್, ಮಾಸ್ಕ್, ಬಕೆಟ್‌ಗಳನ್ನು ಅಂಗನವಾಡಿ ಕೇಂದ್ರದ ಬಳಕೆಗಾಗಿ ವಿತರಣೆ ಮಾಡಲಾಯಿತು.
ಮಾತೃವಂದನ ಯೋಜನೆ ಅಡಿ ಕಾರ್ಯಕರ್ತರೆ ಮೊಬೈಲ್‌ನಲ್ಲಿ ಅರ್ಜಿಗಳನ್ನು ದಾಖಲೆ ಮಾಡುವ ಕುರಿತು ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಮುರುಳಿರವರು ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲಾಮಟ್ಟದ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಿದ್ದು, ಎಲ್ಲಾ ಫಲಾನುಭವಿಗಳಿಗೆ ಇದು ತಲುಪುವಂತೆ ಸಹಕರಿಸಲು ಕೋರಿದರು.
ಮೇಲ್ವಿಚಾರಕರು, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಸಹಕಾರ, ಮಾರ್ಗದರ್ಶನ ನೀಡಲು ಕೋರಿದರು.
ಇಲಾಖೆಯ ಯೋಜನೆಗಳನ್ನು ಸೂಕ್ತ ಸಮಯದಲ್ಲಿ ಸೂಕ್ತ ಫಲಾನುಭವಿಗಳಿಗೆ ತಲುಪಿಸಲು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಪೋಷಣ್ ಅಭಿಯಾನ ಜಿಲ್ಲಾ ಸಂಯೋಜಕಿ ಕಾವ್ಯ, ಮಾತೃ ವಂದನ ಸಂಯೋಜಕಿ ಚೈತ್ರ, ಕಸಬಾ ಮತ್ತು ಚೇರಂಬಾಣೆ ವೃತ್ತದ ಅಂಗನವಾಡಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.