

ಬೇಲೂರು: ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಿ ಅಗತ್ಯ ಸೌಲಭ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಿತರಿಸಲಾಗುತ್ತಿದೆ ಎಂದು ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಚಂದ್ರಶೇಖರ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿ ವಾಸವಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ವೃದ್ಧೆ ದ್ಯಾವಮ್ಮರಿಗೆ ಅಗತ್ಯ ವಸ್ತುಗಳ ಕಿಟ್ ಹಾಗೂ ಮಸಾಶನ ವಿತರಿಸಿ ಮಾತನಾಡಿದರು.
ಬೇಲೂರು ತಾಲೂಕಿನಲ್ಲಿ ಈಗಾಗಲೇ 90 ಅಸಹಾಯಕ ಕುಟುಂಬಗಳಿಗೆ ಮಾಸಾಶನ ಮತ್ತು ಅಗತ್ಯ ವಸ್ತುಗಳ ಕಿಟ್ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಮಂಗಳವಾರ 20 ಜನರಿಗೆ ಅಗತ್ಯ ವಸ್ತುಗಳಿರುವ ಪಡಿತರ ಕಿಟ್ ವಿತರಿಸಲಾಗುತ್ತಿದೆ. ವಾರ್ಷಿಕವಾಗಿ 1.80 ಕೋಟಿ ರೂ.ಗಳನ್ನು ಪ್ರತಿ ತಿಂಗಳು ಒಂದು ಸಾವಿರ ರೂ.ದಂತೆ ಮಾಸಾಶನ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಜನ ಜಾಗೃತಿ ಸಂಸ್ಥೆ ಉಪಾಧ್ಯಕ್ಷ ಸೋಮಶೇಖರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮೋನಿಕಾ, ವಲಯ ಮೇಲ್ವಿಚಾರಕರಾದ ಭಾರತಿ, ಚಂದನ್ ಸೇರಿದಂತೆ ಇತರರಿದ್ದರು.