

ಮಂಡ್ಯ: ಸಮಾಜದಲ್ಲಿ ಅನೇಕರಿಗೆ ಬಹಳಷ್ಟು ಸಮಸ್ಯೆಗಳಿರುತ್ತದೆ. ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದಿಂದ ಹಲವು ಇಲಾಖೆಗಳಿವೆ. ಇವುಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳಿ. ಅದೇ ರೀತಿ ಅಂಗವಿಕಲರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಇರುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಇಲಾಖೆಗಳಿಗೆ ತಿಳಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ನಗರದ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೆಂಗಳೂರು ಅಲಿಂಕೋ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗವೈಫಲ್ಯಯತೆಯಿಂದ ಜೀವನ ನಡೆಸುತ್ತಿರುವವನ್ನು ಗುರುತಿಸಿ ಅವರಿಗೆ ಅನುಕೂಲವಾಗಲು ಸಾಧನ ಸಲಕರಣೆಗಳನ್ನು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ದೇಹದ ಅಂಗ ವೈಫಲ್ಯತೆಯಿಂದ ಬದುಕು ಕೊನೆಯಾಗುವುದಿಲ್ಲ. ಅಂಗವೈಫಲ್ಯತೆ ಹೊಂದಿದ್ದರೂ ಅಂಗವಿಕಲರಲ್ಲಿ ಒಂದು ವಿಶೇಷವಾದಂತಹ ಶಕ್ತಿ. ಚೈತನ್ಯವನ್ನು ದೇವರು ನೀಡಿರುತ್ತಾರೆ. ಅಂಗವಿಕಲರನ್ನು ಸಮಾಜದಲ್ಲಿ ಗುರುತಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕೆಂಬ ಸದುದ್ದೇಶದಿಂದ ಸಾಧನ ಸಲಕರಣೆಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ತಲುಪಬೇಕು. ಸಮಾಜವು ಎಂದಿಗೂ ಅಂಗವಿಕಲರನ್ನು ಪ್ರೋತ್ಸಾಹಿಸುವಲ್ಲಿ ಮುಂದಿರಬೇಕು. ಅವರ ಶಕ್ತಿಯನ್ನು ಕುಗ್ಗಿಸುವವಂತಹ ಮಾತುಗಳನ್ನಾಡಬಾರದು. ಅಂಗವಿಕಲರ ಅಭಿವೃದ್ಧಿಗಾಗಿ ಸಹಕರಿಸಿ ಎಂದು ಕರೆ ನೀಡಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಅಂಗವಿಕಲರು ಸಾಮಾನ್ಯರಿಗಿಂತಲೂ ವೈಶಿಷ್ಟವಾಗಿ ಬದುಕಬೇಕೆಂಬ ಬಯಕೆಯಿಂದ ಜಿಲ್ಲೆಯಲ್ಲಿ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಪಾಸಣೆ ಶಿಬಿರ ಯಶಸ್ವಿ ನಡೆಯಲು ಸಹಕರಿಸಿದ ಅಭಿನಂದನೆಗಳು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಜೀವನ ಮಟ್ಟ ಸುಧಾರಣೆ ಕಾಣಬೇಕೆಂಬ ಉದ್ದೇಶದಿಂದ ಭಾರತ ಸರ್ಕಾರ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಸಾಧನ ಸಲಕರಣೆಗಳನ್ನು ಒದಗಿಸಿಕೊಡುತ್ತದೆ. ಜಿಲ್ಲೆಯಲ್ಲಿನ ಹಿರಿಯ ನಾಗರಿಕರು ಹಾಗೂ ವಯೋವೃದ್ಧರು ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೋಮಲ್ಕುಮಾರ್, ಡಿಡಿಪಿಐ ಎಚ್.ಶಿವರಾಮೇಗೌಡ, ಜಿಲ್ಲಾ ಉಪ ಸಮನ್ವಯ ಅಧಿಕಾರಿ ಚಂದ್ರಶೇಖರ್, ಪ್ರೇರಣ ಅಂಗವಿಕಲರ ಸಂಸ್ಥೆಯ ರವಿಕುಮಾರ್ ಹಾಜರಿದ್ದರು.