ಪಟಾಕಿ ತಯಾರಿಕೆ ಸಂಪೂರ್ಣ ನಿಷೇಧವಾಗಲಿ: ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಆಗ್ರಹ

Distribution of English dictionary to the students Mandya
Published on

ಮಂಡ್ಯ: ಜೀವಹಾನಿ ತಡೆಯುವ ಜತೆಗೆ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಪಟಾಕಿ ತಯಾರಿಕೆ ಸಂಪೂರ್ಣ ನಿಷೇಧವಾಗಲಿ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಆಗ್ರಹಿಸಿದರು.

ತಾಲೂಕಿನ ಶ್ರೀನಿವಾಸಪುರ-ಮರಕಾಡುದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ವಿವೇಕಾನಂದ ಅಲಯನ್ಸ್ ಸಂಸ್ಥೆ, ಭಾರತೀನಗರ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪಟಾಕಿ-ಬಿಟ್ಟಾಕಿ ಪರಿಸರ ಉಳಿಸಿ ಜಾಗೃತಿ ಹಾಗೂ ವಿದ್ಯಾರ್ಥಿಗಳಿಗೆ ಆಂಗ್ಲ ನಿಘಂಟು ಮತ್ತು ಔಷಧ ಸಸ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವಸಂಕುಲವನ್ನು ಮಾಲಿನ್ಯದ ಅಪಾಯದಿಂದ ರಕ್ಷಿಸಲು ಎಲ್ಲ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸುವುದು ಅತ್ಯಗತ್ಯ. ಇದರಿಂದಾಗಿ ಪರಿಸರ ಹಾನಿ ಮತ್ತು ಸಾಕಷ್ಟು ಜನರ ಜೀವಗಳನ್ನು ಉಳಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಇನ್ನಾದರೂ ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದರು.

ದೆಹಲಿಯಲ್ಲಿ ವಾಯುಮಾಲಿನ್ಯ ಮುಂದುವರೆದಿರುವ ಹಿನ್ನಲೆಯಲ್ಲಿ ಮತ್ತು ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ, ಸಿಡಿತ, ಸಂಗ್ರಹಣೆಗೆ ದೆಹಲಿ ಸರ್ಕಾರ ನಿಷೇಧ ಹೇರಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಮತ್ತು ದೇಶದ ಎಲ್ಲ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕಾನೂನು ಜಾರಿ ಮಾಡಿ ಜೀವಹಾನಿ ರಕ್ಷಿಸಲಿ. ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿ ಎಂದರೆ ದೀಪಗಳ ಹಬ್ಬ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ಹಬ್ಬವನ್ನು ಪಟಾಕಿ ಸಿಡಿಸಿ ಸಂಭ್ರಮಿಸಬೇಕು ಎನ್ನುವ ಆಲೋಚನೆ ಮಾನವನ ತಲೆಗೆ ಯಾವಾಗ ಹೊಕ್ಕಿತೋ ತಿಳಿಯದು. ಈ ವಿಲಕ್ಷಣ ಆಚರಣೆಯಿಂದಾಗಿ ಮಾನವ ತನಗೆ ಕುತ್ತು ತಂದುಕೊಳ್ಳುತ್ತಿರುವುದು ಮಾತ್ರವಲ್ಲದೆ ಪರಿಸರ, ಪ್ರಾಣಿ, ಪಕ್ಷಿಗಳು ಸೇರಿದಂತೆ ಅಪಾರ ಜೀವರಾಶಿಗಳಿಗೂ ಸಂಕಟ ತಂದಿಟ್ಟಿದ್ದಾನೆ ಎಂದು ಎಚ್ಚರಿಸಿದರು.

ಗ್ರಾಮೀಣ ವಿದ್ಯಾರ್ಥಿಗಳು ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿಯೇ ಕಲಿಯತ್ತಿದ್ದಾರೆ, ಸಮಗ್ರ ಮೂಲ ಸೌಲಭ್ಯದೊಂದಿಗೆ ಗುಣಮಟ್ಟದ ಶಿಕ್ಷಣ ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಎಲ್ಲವೂ ಸಾಧ್ಯವಿಲ್ಲ. ಆದ್ದರಿಂದ ಸಂಘ ಸಂಸ್ಥೆಗಳು ಕೈಜೊಡಿಸಿ, ಸರ್ಕಾರಿ ಶಾಲಾ ವಿದ್ಯಾಥಿಗಳ ಸಬಲೀಕರಣಕ್ಕೆ ಹೆಚ್ಚು ಮಹತ್ವ ನೀಡುವುದು ಅಗತ್ಯ ಎಂದು ಸಲಹೆ ನೀಡಿದರು.

ಭಾರತೀನಗರ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ವಸಂತಮ್ಮ ಮಾತನಾಡಿ, ದೀಪಾವಳಿ ನಮ್ಮ ಪರಿಸರ ಹಬ್ಬ. ಜ್ಞಾನದ ಸೂಚಕ ಬೆಳಕಿನ ವೈಭವದಲ್ಲಿ ಆಚರಿಸುವ ಬಲದು ಪರಿಸರ ಮಾರಕವಾಗಿ ಪಟಾಕಿ ಸಿಡಿಸಿ, ಜೀವಹಾನಿ ಮಾಡಿಕೊಳ್ಳುತ್ತಿರುವುದು ಮಾನವಧರ್ಮ ಅಲ್ಲ ಎಂದು ನುಡಿದರು.

ಮಾಂಡವ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಶಿವಕುಮಾರ್, ಮುಂದಿನ ದಿನಗಳಲ್ಲಿ ಹಳ್ಳಿಗಳಿಗೂ ಆಕ್ಸಿಜನ್ ಸಿಲಿಂಡರ್ ಬರುತ್ತದೆ. ಗುಣಮಟ್ಟದ ಪರಿಸರ ನಾಶವಾಗುತ್ತಿದೆ. ಹಣಕೊಟ್ಟು ಖರೀದಿಸಿದ ಉತ್ತಮ ಗಾಳಿ, ಮೂಗಿಗೆ ಮಾಸ್ಕ್, ಬೆನ್ನಿಗೆ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಎಚ್.ಜೆ.ರಾಣಿ, ವಿವೇಕಾನಂದ ಅಲಯನ್ಸ್ ಸಂಸ್ಥೆ ಅಧ್ಯಕ್ಷ ದಯಾನಂದ, ಸದಸ್ಯರಾದ ಶಂಕರೇಗೌಡ, ನಾಗರತ್ನ, ಗೀತಾ, ಕಾರ್ಯದರ್ಶಿ ಪ್ರಭಾವತಿ, ಹವ್ಯಾಸಿ ಕಲಾವಿದೆ ಮೀನಾ, ಮುಖ್ಯಶಿಕ್ಷಕ ಕೆ.ಬಿ.ಮಹೇಂದ್ರ, ಕೆ.ಬಿ.ಆಶಾರಾಣಿ, ಸೌಭಾಗ್ಯಾ, ಇಂದಿರಾ, ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net