

ಮೈಸೂರು: ಜಿಲ್ಲೆಯಲ್ಲಿ ಬರಪರಿಹಾರ ವಿತರಣೆ ಪ್ರಾರಂಭಿಸಲಾಗಿದ್ದು, ಮೊದಲ ಕಂತಿನಲ್ಲಿ 72,277 ರೈತರಿಗೆ 12.81 ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2023ರಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಬರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲ 9 ತಾಲೂಕುಗಳನ್ನು ಬರಪೀಡಿತ ತಾಲೂಕಾಗಿ ಘೋಷಣೆ ಮಾಡಿದೆ. ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇರೆಗೆ ಫ್ರೂಟ್ಸ್ ಐಡಿ ಹೊಂದಿರುವ ಹಾಗೂ ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆಯಾಗಿರುವ ರೈತರಿಗೆ ಡಿಬಿಟಿ ಮೂಲಕ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಮೊದಲನೇ ಕಂತಾಗಿ ಗರಿಷ್ಠ 2,000 ರೂ.ವರೆಗೆ ಬೆಳೆ ಹಾನಿ ಪರಿಹಾರ ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಳೆಹಾನಿ ಪರಿಹಾರದ ಹಣ ಖಾತೆಗೆ ಜಮಾ ಆಗದೆ ಇದ್ದರೆ ಅಥವಾ ಬೆಳೆ ಪರಿಹಾರದ ಕುರಿತು ಹೆಚ್ಚಿನ ಮಾಹಿತಿ ಅವಶ್ಯಕತೆ ಇದ್ದರೆ ರೈತರು ತಾಲೂಕು ಹಂತದಲ್ಲಿ ತೆರೆದಿರುವ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಮೈಸೂರು: 0821-2414812, ನಂಜನಗೂಡು: 08221-223108, ತಿ.ನರಸೀಪುರ: 9148555170, ಎಚ್.ಡಿ.ಕೋಟೆ: 08228-255325, ಹುಣಸೂರು: 08222- 252959, ಪಿರಿಯಾಪಟ್ಟಣ: 08223-274175, ಸರಗೂರು: 08228-296100, ಕೆ.ಆರ್. ನಗರ: 08223-262371, ಸಾಲಿಗ್ರಾಮ: 08223- 262371 ಸಂಪರ್ಕಿಸಬಹುದು.
ಬೆಳೆಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೆ ಫ್ರೂಟ್ಸ್ ಐಡಿ ಸೃಜಿಸಿಕೊಳ್ಳದ ರೈತರುಗಳು ತಮ್ಮ ಆಧಾರ್ ಹಾಗೂ ಪಹಣಿ ಮಾಹಿತಿಯನ್ನು ನೀಡಿ ಫ್ರೂಟ್ಸ್ ಐಡಿ ಸೃಜಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ರೈತರು ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.