

ರಾಯಚೂರು: ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆ ಹಾನಿಗೆ ಪ್ರತ್ಯೇಕ ಪರಿಹಾರ ನೀಡುವ ಕುರಿಂತೆ ನ.9ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೃಷಿ ಖಾತೆ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಬರ ಪರಿಹಾರ ವಿತರಣೆ ಕುರಿತಂತೆ ಟಾಸ್ಕ್‌ಪೋರ್ಸ್ ಸಮಿತಿ ರಚಿಸಲಾಗಿದ್ದು, ಸಮಿತಿ ವರದಿ ಪಡೆದು ಪರಿಹಾರ ವಿತರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸರ್ಕಾರ ಬರ ಪರಿಹಾರ ಅನುದಾನ ಬಿಡುಗಡೆ ಮಾಡಿಲ್ಲ. ಪ್ರಧಾನಿ ಮತ್ತು ಕೇಂದ್ರ ಕೃಷಿ ಸಚಿವರು ಭೇಟಿಗೆ ಅವಕಾಶ ನೀಡುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ರಾಜ್ಯದ 28 ಬಿಜೆಪಿ ಸಂಸದರು ಕೇಂದ್ರದಿಂದ 17 ಸಾವಿರ ಕೋಟಿ ರೂ. ಬಿಡುಗಡೆ ಮಾಡಿಸಿದರೆ ಅವರಿಗೆ ವಿಧಾನಸೌಧದಲ್ಲಿ ಸನ್ಮಾನಿಸಲಾಗುವುದು.
ಪ್ರಧಾನಿ ಮೋದಿ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನಿಂದ ಕೆಂಗೆಟ್ಟು ರಾಜ್ಯದ ಸಿಎಂ ಮತ್ತು ಡಿಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ. ಪಂಚರಾಜ್ಯ ಹಾಗೂ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವು ಸಾಸಲಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಹೀಗಾಗಿ ಸಿಎಂ ಯಾರಾಗುತ್ತಾರೆ ಎಂಬ ಚರ್ಚೆ ಅಪ್ರಸ್ತುತ. ಸತೀಶ ಜಾರಕಿಹೊಳೆ ಸಿಎಂ ಆಗಲು ಸಮರ್ಥರು ಎಂದು ಸ್ವಾಮೀಜಿ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ.
ಬಿಜೆಪಿ ನಾಯಕರು ಬರ ಅಧ್ಯಯನದ ಹೆಸರಿನಲ್ಲಿ ಲೋಕಸಭೆ ಚುನಾವಣೆ ಉದ್ಧೇಶದಿಂದ ಪ್ರವಾಸ ಆರಂಭಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಾಡಿದ್ದ ರೈತರ ಸಾಲ ಮನ್ನಾ ಇಂದಿಗೂ ಆಗಿಲ್ಲ. ಅವರು ಪ್ರವಾಸ ನಡೆಸಿ ಜನರಿಗೆ ಉಪಯೋಗವಾಗುವ ಸಲಹೆ ನೀಡಿದರೆ ಸ್ವೀಕರಿಸಲಾಗುವುದು.
ಸಲ್ ಭೀಮಾ ಯೋಜನೆಯಡಿ ಬೇರೆಯವರ ಖಾತೆಗೆ ಹಣ ಜಮಾ ಆಗಿರುವ ಪ್ರಕರಣವನ್ನು ಈಗಾಗಲೇ ಸಿಬಿಐಗೆ ಒಪ್ಪಿಸಲಾಗಿದೆ. ಮುಂದಿನ ವರ್ಷದಿಂದ ಯೋಜನೆಯಡಿ ಬದಲಾವಣೆ ತರಲಾಗುವುದು. ಒಂದು ವರ್ಷ ವರ್ಷಕ್ಕೆ ಸಿಮೀತವಾಗಿ ಯೋಜನೆ ರೂಪಿಸಲಾಗುತ್ತಿದೆ.
ಹಿಂದೆ ಮೋಡ ಬಿತ್ತನೆ ಮಾಡಿರುವುದು ಯಶಸ್ವಿಯಾಗದಿರುವ ಕಾರಣ ಸರ್ಕಾರದ ಮೋಡ ಬಿತ್ತನೆ ಕುರಿತು ಪ್ರಸ್ತಾಪವಿಲ್ಲ. ಕೃಷಿ ಭಾಗ್ಯ ಯೋಜನೆಯನ್ನು ಪುನರಾರಂಭಿಸಲಾಗುತ್ತಿದ್ದು, ಕೃಷಿ ಹಬ್ಬ ಮಾಡಲು ನೂರು ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ ಎಂದು ಎನ್.ಚೆಲುವರಾಯಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು, ಮಾನ್ವಿ ಶಾಸಕ ಹಂಪಯ್ಯ ನಾಯಕ ಉಪಸ್ಥಿತರಿದ್ದರು.