

ಮಂಡ್ಯ: ಪಾಂಡವಪುರ ತಾಲೂಕು ಹೆಗ್ಗಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ತಾಲೂಕಿನ ಕೆನರಾ ಬ್ಯಾಂಕ್ ಬಸರಾಳು ಶಾಖೆಯಿಂದ ಸಿಎಸ್‌ಆರ್ ಅನುದಾನದಡಿ ಡೆಸ್ಕ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಸಂಗಮೇಶ್ ಪದನಾಳ್ ಮಾತನಾಡಿ, ವಿದ್ಯಾರ್ಥಿಗಳು ಶ್ರಮತೆ, ದಕ್ಷತೆ, ಶ್ರದ್ದೆಯಿಂದ ಮುನ್ನಡೆದರೆ ಸಾಧನೆ ಮಾಡಬಹುದು. ಜತೆಗೆ ಜೀವನದಲ್ಲಿ ದೇಶದ ಮಹಾನ್ ನಾಯಕರ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಬ್ಯಾಂಕ್‌ನ ಸಿಎಸ್‌ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಪರಿಕರಗಳನ್ನು ನೀಡಲಾಗುತ್ತಿದೆ. ಮಕ್ಕಳು ಇಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಮಾತನಾಡಿ, ಹಣ, ಆಸ್ತಿಯನ್ನು ಕಳ್ಳತನ ಮಾಡಬಹುದು. ಆದರೆ ವಿದ್ಯೆಯನ್ನು ಯಾರಿಂದಲೂ ಕಳ್ಳತನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯೆಯನ್ನು ಸಂಪಾದನೆ ಮಾಡಬೇಕು. ತಂತ್ರಜ್ಞಾನದ ನಾಗಲೋಟದಲ್ಲಿ ಸಮಾಜ ವೇಗವಾಗಿ ಮುನ್ನಡೆಯುತ್ತಿದೆ. ಬದಲಾವಣೆಯ ವ್ಯವಸ್ಥೆಯಲ್ಲಿ ನಾವು ಸಹ ಬದಲಾವಣೆಯಾಗಿ ಪ್ರಗತಿ ಸಾಧನೆ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಗ್ರಾಪಂ ಸದಸ್ಯ ಎಚ್.ಜೆ.ರಾಮಕೃಷ್ಣ ಮಾತನಾಡಿ, ಬ್ಯಾಂಕ್‌ನ ಅಧಿಕಾರಿಗಳು 7 ಡೆಸ್ಕ್‌ಗಳನ್ನು ನೀಡಿದ್ದಾರೆ. ಇದಕ್ಕೆ ಹೆಗ್ಗಡಹಳ್ಳಿ ಗ್ರಾಮದವರೆ ಆದ ಕೆನರಾಬ್ಯಾಂಕ್‌ನ ವ್ಯವಸ್ಥಾಪಕ ದಿಲೀಪ್‌ಕುಮಾರ್ ಸಹಕಾರ ನೀಡಿದ್ದಾರೆ. ಅವರಿಗೆ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೆನರಾ ಬ್ಯಾಂಕ್ ಬಸರಾಳು ಶಾಖೆಯ ವ್ಯವಸ್ಥಾಪಕ ದಿಲೀಪ್‌ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್, ಮುಖ್ಯಶಿಕ್ಷಕ ಯೋಗೇಶ್, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಬೆಟ್ಟೇಗೌಡ ಇತರರಿದ್ದರು.