ಕಾಸರಗೋಡು: ನಕಲಿ ಔಷಧ ಜತೆಗೆ ಚಿಕಿತ್ಸೆಯನ್ನೂ ನೀಡುತ್ತಿದ್ದ ಪಾಲಕ್ಕಾಡ್ ಮಣ್ಣಾರ್‌ಕಾಡ್ ನಿವಾಸಿ ಸಿ.ಎಂ.ಜಲಾಲುದ್ದೀನ್(56) ಎಂಬಾತನನ್ನು ಮಂಜೇಶ್ವರ ಠಾಣೆ ಎಸ್.ಐ ಕೆ.ವಿ.ಸುಮೇಶ್‌ರಾಜ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಉಪ್ಪಳ ಪಚ್ಲಂಪಾರೆಯಲ್ಲಿ ಅಲ್ಲಿನ ಫ್ರೆಂಡ್ಸ್ ಕ್ಲಬ್ ಒಂದರ ಆಶ್ರಯದಲ್ಲಿ ನಡೆದ ವೈದ್ಯಕೀಯ ಶಿಬಿರದಲ್ಲಿ ವೈದ್ಯಕೀಯ ಅರ್ಹತೆ ಹೊಂದಿರದ ಈತ ರೋಗಿಗಳ ತಪಾಸಣೆ ನಡೆಸಿ, ಔಷಧ ನೀಡಿರುವ ಬಗ್ಗೆ ಲಭಿಸಿದ ದೂರಿನನ್ವಯ ಈತನನ್ನು ಬಂಧಿಸಲಾಗಿದೆ. ನಕಲಿ ವೈದ್ಯನಿಂದ ವೈದ್ಯಕೀಯ ಶಿಬಿರ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಜಿಲ್ಲಾ ವೈದ್ಯಾಧಿಕಾರಿ ಶಿಫಾರಸಿನ ಮೇರೆಗೆ ಡೆಪ್ಯುಟಿ ಡಿಎಂಒ ನಡೆಸಿದ ಕಾರ್ಯಾಚರಣೆಯಿಂದ ನಕಲಿ ವೈದ್ಯನನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಿಂದ ಜಮಾಲುದ್ದೀನ್‌ಗೆ ವೈದ್ಯಕೀಯದ ಬಗ್ಗೆ ಯಾವುದೇ ಪದವಿ ಅಥವಾ ಅರ್ಹತೆ ಹೊಂದಿಲ್ಲ ಎಂಬುದನ್ನು ಪತ್ತೆಹಚ್ಚಲಾಗಿದೆ. ಈತ ಬೇರೆ ಕಡೆ ಶಿಬಿರ ನಡೆಸಿ ಔಷಧ ವಿತರಿಸಿರುವ ಅಥವಾ ಬೇರೆ ಕಡೆ ಕೇಸುಗಳಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.