

ಪಾಂಡವಪುರ: ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಕಂದ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಬುಧವಾರ ಕಾಂಪೋಸ್ಟಿಂಗ್ ಕಿಟ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸೃಜನಶೀಲ ಕಾರ್ಯಕ್ರಮದಡಿ ತ್ಯಾಜ ಸಂಗ್ರಹ ಮತ್ತು ಅನುಪಯುಕ್ತ ತರಕಾರಿಯನ್ನು ಗೊಬ್ಬರವಾಗಿ ಪರಿವರ್ತಿಸುವ ಕುರಿತು ಮಾಹಿತಿ ನೀಡಲಾಯಿತು. ಮಹಿಳೆಯರಿಗೆ ಕಾಂಪೋಸ್ಟಿಂಗ್ ಕಿಟ್ ವಿತರಣೆ ಮಾಡುವ ಮೂಲಕ ಯೋಜನಾಧಿಕಾರಿ ಯಶವಂತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತ್ಯಾಜ್ಯ ವಿಲೇವಾರಿ ತಜ್ಞ ಎಚ್.ಎಸ್.ಚಂದ್ರಶೇಖರ ಮಾತನಾಡಿ, ಪ್ರತಿ ಮನೆಯಲ್ಲಿ ಹಸಿ ಮತ್ತು ಒಣಕಸದ ವಿಲೇವಾರಿಯನ್ನು ಸಮರ್ಥವಾಗಿ ಮಾಡಿದರೆ ತ್ಯಾಜ್ಯದ ಸಮಸ್ಯೆ ಸಾಧ್ಯವಾದಷ್ಟು ಕಡಿಮೆ ಆಗಲಿದೆ. ಹಸಿ ಮತ್ತು ಒಣ ಕಸವನ್ನು ವಿಲೇವಾರಿ ಮಾಡುವ ಕುರಿತು ಮಹಿಳೆಯರು ವೈಜ್ಞಾನಿಕವಾಗಿ ಅರಿವು ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಸಿ ಮತ್ತು ಒಣಕಸ ಬೇರ್ಪಡಿಸಿ ಸಂಗ್ರಹಿಸುವ ಕುರಿತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಹಿಳೆಯರಿಗೆ ಅರಿವು ಮೂಡಿಸುವುದರ ಜತೆಗೆ ಕಸ ವಿಂಗಡಿಸಿ ಗೊಬ್ಬರವನ್ನಾಗಿ ಪರಿವರ್ತಿಸಲು ಅತ್ಯವಾದ ಕಾಂಪೋಸ್ಟಿಂಗ್ ಕಿಟ್‌ಗಳನ್ನು ವಿತರಣೆ ಮಾಡಿದೆ ಎಂದರು.
ಯೋಜನಾಧಿಕಾರಿ ಯಶವಂತ್ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣ, ಮಹಿಳೆಯರಲ್ಲಿ ಆರ್ಥಿಕ ಶಿಸ್ತು, ಕಾನೂನು ಅರಿವು-ನೆರವು, ಸ್ವಉದ್ಯೋಗ ಒದಗಿಸಿಕೊಡುವ ಕುರಿತು ಅರಿವು ಮೂಡಿಸಲಾಗುತ್ತಿದೆ. ಹಸಿ ಮತ್ತು ಒಣಕಸ ವಿಂಗಡಿಸಿ ಗೊಬ್ಬರ ತಯಾರಿಸಲು ಕಾಂಪೋಸ್ಟಿಂಗ್ ಘಟಕ ಸಹಕಾರಿಯಾಗಿದ್ದು ಮಹಿಳೆಯರಿಗೆ ಕಾಂಪೋಸ್ಟಿಂಗ್ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.
ವಲಯ ಮೇಲ್ವಿಚಾರಕ ಸಂತೋಷ್ ಕುಮಾರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ತೇಜಸ್ವಿ, ಸೇವಾಪ್ರತಿನಿಧಿ ಶೀಲಾ ಇತರರು ಇದ್ದರು.