ರೈತರಿಗೆ ಪರಿಹಾರ ಧನದ ಚೆಕ್ ವಿತರಣೆ, ಸಚಿವ ಡಾ.ಎಂ.ಬಿ. ಪಾಟೀಲ ನೀಡಿದ ಸಂದೇಶವೇನು ಗೊತ್ತಾ?

MINISTER M B PATIL UKP PROGRAM
ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯಲ್ಲಿ ನಡೆದ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಸಚಿವ ಡಾ.ಎಂ.ಬಿ. ಪಾಟೀಲರು ಚಿಕ್ಕಗಲಗಲಿ ಮತ್ತು ಶಿರಬೂರ ಗ್ರಾಮಗಳ ಸಂತ್ರಸ್ತರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿದರು. ಗಿತ್ತೆ ಮಾಧವ ವಿಠ್ಠಲರಾವ, ಸಂಗಮೇಶ ಬಬಲೇಶ್ವರ, ಕುಮಾರ ದೇಸಾಯಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸರ್ಕಾರ ನೀಡುವ ಪರಿಹಾರ ಹಣದ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅಭಿವೃದ್ಧಿ ಯೋಜನೆಗಳ ಸಂತ್ರಸ್ತರಿಗೆ ಕಿವಿಮಾತು ಹೇಳಿದರು.

ಬುಧವಾರ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಕೆಬಿಜೆಎನ್‌ಎಲ್ 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕಟ್ಟಡ, ಭೂಮಿಯನ್ನು ಕಳೆದುಕೊಂಡ ಚಿಕ್ಕಗಲಗಲಿ ಮತ್ತು ಶಿರಬೂರ ರೈತರಿಗೆ ಪರಿಹಾರ ಧನದ ಚೆಕ್ ವಿತರಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಯೋಜನೆಗಳಿಗಾಗಿ ಆಸ್ತಿ-ಪಾಸ್ತಿ ಕಳೆದುಕೊಳ್ಳುವ ಜನರು ತಮ್ಮ ಪೂರ್ವಜರಿಂದ ಬಂದಿರುವ ಮನೆ, ಜಮೀನು, ಗ್ರಾಮಗಳ ಜೊತೆ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಈ ಗ್ರಾಮಗಳ ಜನ ರಾಜ್ಯದ ಅಭಿವೃದ್ಧಿಗಾಗಿ ಮಾಡಿರುವ ಮಹಾನ್ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸುವೆ. ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈಗ ಪರಿಹಾರ ಪಡೆದಿರುವ ರೈತರು ಹಣವನ್ನು ವ್ಯರ್ಥ ಮಾಡಬಾರದು. ನೀಡಲಾಗಿರುವ ನಿವೇಶನಗಳನ್ನು ಮಾರಾಟ ಮಾಡಬಾರದು. ಮುಂದಿನ ಪೀಳಿಗೆಗಾಗಿ ಅವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಈಗ ಭೂಮಿಗೆ ಉತ್ತಮ ಬೆಲೆಯಿದೆ ಎಂದು ಹೇಳಿದರು.

ಪುನರ್ವಸತಿ ಕೇಂದ್ರಗಳಲ್ಲಿ ಜಮೀನುಗಳ ವಿಚಾರದಲ್ಲಿ ಗದ್ದಲ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಕೇಂದ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಿದ್ದರೆ ಮಾಡಿಸಿ ಕೊಡುತ್ತೇನೆ. ಆದರೆ, ಹಿರಿಯರ ಆಸ್ತಿ, ಭೂಮಿಯನ್ನು ಮಾರಾಟ ಮಾಡದೆ ಉಳಿಸಿಕೊಂಡು ಹೋಗಬೇಕು ಎಂದರು.

ಮೂರು ತಿಂಗಳಲ್ಲಿ ಉಳಿದವರಿಗೆ ಪರಿಹಾರ

ಈಗ ಚಿಕ್ಕಗಲಗಲಿಯ 242 ಫಲಾನುಭವಿಗಳಿಗೆ ರೂ. 18.10 ಕೋಟಿ ಮತ್ತು ಶಿರಬೂರ ಗ್ರಾಮದ 173 ಫಲಾನುಭವಿಗಳಿಗೆ 11.79 ಕೋಟಿ ಸೇರಿದಂತೆ ಒಟ್ಟು 415 ಫಲಾನುಭವಿಗಳಿಗೆ ರೂ. 29.90 ಕೋಟಿ ಪರಿಹಾರ ವಿತರಿಸಲಾಗುತ್ತಿದೆ. ಇನ್ನುಳಿದ ಫಲಾನುಭವಿಗಳಿಗೆ ಮೂರು ತಿಂಗಳಲ್ಲಿ ಪರಿಹಾರದ ಧನ ವಿತರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ಭಾಗದ ಅಸ್ಮಿತೆಯಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರಗಳ ಕರ್ತವ್ಯವಾಗಿದೆ ಎಂದರು.

ಯುಕೆಪಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಮಹಾ ವ್ಯವಸ್ಥಾಪಕ ಗಿತ್ತೆ ಮಾಧವ ವಿಠ್ಠಲರಾವ ಮಾತನಾಡಿ, ಸಂತ್ರಸ್ತರು ತಮ್ಮ ಸಮಸ್ಯೆಗಳ ಕುರಿತು ಗಮನಕ್ಕೆ ತಂದರೆ ಕೂಡಲೇ ಸ್ಪಂದಿಸುತ್ತೇನೆ. ಯಾವುದೇ ಹಿಂಜರಿಕೆ ಇಲ್ಲದೇ ತಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಚಿಕ್ಕಗಲಗಲಿ ಮತ್ತು ಶಿರಬೂರ ಗ್ರಾಮಗಳ ತಲಾ 11 ಸಂತ್ರಸ್ತರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಯಿತು.
ಚಿಕ್ಕಗಲಗಲಿಯ ಶ್ರದ್ಧಾನಂದ ಆಶ್ರಮದ ಜನಾರ್ಧನ ಸ್ವಾಮೀಜಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಸೂಪರಿಂಟೆಂಡೆಂಟ್ ಇಂಜಿನಿಯರ್ ಹಣಮಂತ ದಾಸರ, ಪ್ರಧಾನ ಲೆಕ್ಕಾಧಿಕಾರಿ ಶಾಂತಾ ಕಡಿ, ಹೆಚ್ಚುವರಿ ವಿಶೇಷ ಭೂಸ್ವಾಧಿನಾಧಿಕಾರಿ ಎಂ.ಬಿ. ನಾಗಠಾಣ, ವಿಶೇಷ ಜಿಲ್ಲಾಧಿಕಾರಿ ರಮೇಶ ಕೊಲ್ಹಾರ, ಗ್ರಾಪಂ ಅಧ್ಯಕ್ಷೆ ಅನೀಲ ಧರೆಪ್ಪ ಕನಮಡಿ, ತಹಸೀಲ್ದಾರ್ ಸಂತೋಷ ಮ್ಯಾಗೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net