

ನರಗುಂದ: ನಿರಂತರ ಮಳೆ, ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯ ಭೀಕರ ಪ್ರವಾಹದಿಂದ ಹಾನಿಯಾಗಿರುವ ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಸಿಇಒ ಭರತ್ ಎಸ್., ಅವರು ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕಿನ ಬನಹಟ್ಟಿ, ಹದ್ಲಿ, ಯಾವಗಲ್ಲ ಬಳಿಯ ಬೆಣ್ಣೆಹಳ್ಳ, ಗಂಗಾಪುರ, ರಡ್ಡೇರನಾಗನೂರ ಮುಂತಾದ ಗ್ರಾಮಗಳ ರೈತರ ಜಮೀನುಗಳಲ್ಲಿ ಹಾನಿಯಾಗಿರುವ ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಗೋವಿನಜೋಳ ಹಾಗೂ ಮಲಪ್ರಭಾ ನದಿ ಪ್ರವಾಹಕ್ಕೆ ಹಾನಿಯಾಗಿರುವ ವಿವಿಧ ತೋಟಗಾರಿಕೆ ಬೆಳೆಗಳನ್ನು ಪರಿಶೀಲಿಸಿದರು.
ಗದಗ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದೆ. ಮಳೆ ನಿಂತ ತಕ್ಷಣ ಪ್ರವಾಹದಿಂದ ಹಾನಿಯಾಗಿರುವ ಬೆಳೆಗಳನ್ನು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ ತಕ್ಷಣ ಪರಿಹಾರ ವಿತರಣೆಗೆ ಮುಂದಾಗಬೇಕು. ಪ್ರವಾಹದಿಂದ ಯಾವುದೇ ಜನ, ಜಾನುವಾರುಗಳ ಹಾನಿಯಾಗದಂತೆ ನರಗುಂದ ತಾಲೂಕಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಏಕಾಏಕಿ ಪ್ರವಾಹ ಉಂಟಾದರೆ ಸಾರ್ವಜನಿಕರ ಸುರಕ್ಷತೆಗೆ ಕಾಳಜಿ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಜನಮಟ್ಟಿ ಮಾತನಾಡಿ, ತಾಲೂಕಿನಲ್ಲಿ ಮಳೆ ಹಾಗೂ ಮಲಪ್ರಭಾ ಪ್ರವಾಹದಿಂದ 1156 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾನಿಯಾಗಿರುವ ಅಂದಾಜು ಸಮೀಕ್ಷೆಯ ವರದಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಣ್ಣೆಹಳ್ಳದ ಪ್ರವಾಹದಿಂದ 8062 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಅಂದಾಜು ವರದಿಯನ್ನು ಜಿಲ್ಲಾಡಳಿತಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ನಿರಂತರ ಸುರಿದ ಮಳೆಗೆ ಯಾವುದಾದರೂ ರೈತರ ಬೆಳೆಗಳು ಹಾನಿಯಾಗಿದ್ದರೆ ಅಂತವರ ಜಮೀನುಗಳ ಸಮೀಕ್ಷೆ ಕೈಗೊಂಡು ಅಂತಿಮ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬ್ಯಾಗಿ, ಕೊಣ್ಣೂರಿನ ಕಂದಾಯ ನೀರಿಕ್ಷಕ ಈರಣ್ಣ ಕಳಸಣ್ಣವರ, ಬನಹಟ್ಟಿ ಗ್ರಾಮ ಲೆಕ್ಕಾಧಿಕಾರಿ ಎಚ್.ಆರ್. ಯತ್ನಟ್ಟಿ, ಗ್ರಾಮಾಡಳಿತ ಹಾಗೂ ಪಂಚಾಯಿತಿ ಸಿಬ್ಬಂದಿ, ವಿವಿಧ ಗ್ರಾಮಗಳ ರೈತರು ಹಾಜರಿದ್ದರು.