

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ತೆಂಗಿನ ಸಸಿಯನ್ನು ಮಕ್ಕಳಂತೆ ಪೋಷಣೆ ಮಾಡಿದಲ್ಲಿ ಮುಂದೊಂದು ದಿನ ನಮ್ಮನ್ನು ತಂದೆಯಂತೆ ನೋಡಿಕೊಳ್ಳುತ್ತದೆ ಎಂದು ಕುಮುದ್ವತಿ ಸಂಸ್ಥೆ ಸಂಸ್ಥಾಪಕ ದೊಡ್ಡಕರೇನಹಳ್ಳಿ ಚಿಕ್ಕಹನುಮೇಗೌಡ ತಿಳಿಸಿದರು.
ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಡಾ.ಎಂ.ಲೀಲಾವತಿ ಪಶು ಆಸ್ಪತ್ರೆ ಆವರಣದಲ್ಲಿ ಬೆಂಗಳೂರು ರೋಟರಿ ಸಂಸ್ಥೆ, ಕುಮುದ್ವತಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ತೆಂಗಿನ ಸಸಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಬಹುತೇಕ ರೈತರು ಕೃಷಿ ಕಾಯಕ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ರೈತರು ಲಾಭದಾಯಕ ತೋಟಗಾರಿಕಾ ಬೆಳೆಗಳನ್ನು ಬೆಳೆದಾಗ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ರೈತರು ತೆಂಗು ಬೆಳೆಯನ್ನು 5 ವರ್ಷ ಪೋಷಣೆ ಮಾಡಿದರೆ, ತುಂಬಾ ವರ್ಷಗಳ ಕಾಲ ಇಳುವರಿ ಪಡೆಯಬಹುದು. ಆದ್ದರಿಂದಲೇ ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ಸಾಕಷ್ಟು ರೈತರು ತೆಂಗು ಬೆಳೆದು ಆರ್ಥಿಕವಾಗಿ ಮುಂದುವರಿದಿದ್ದಾರೆ. ರೈತರಿಗೆ ವರ್ಷಕ್ಕೆ ಒಂದು ತೆಂಗಿನ ಮರದಿಂದ 5ಸಾವಿರ ಆದಾಯ ಬರುತ್ತದೆ. ಒಂದು ತೆಂಗಿನ ಮರ 70ವರ್ಷ ಜೀವಿಸುವುದರಿಂದ 65ವರ್ಷಗಳ ಕಾಲ ರೈತರಿಗೆ ನಿಶ್ವಿತ ಆದಾಯ ಸಿಗಲಿದೆ. ಗ್ರಾಮೀಣ ಭಾಗದ ಬಡ ರೈತರ ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ ಉಚಿತ ತೆಂಗಿನ ಗಿಡ ವಿತರಣೆ ಮಾಡಲಾಗುತ್ತಿದೆ ಎಂದರು.ಸೋಲದೇವನಹಳ್ಳಿ ಹಾಗೂ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದ ರೈತರಿಗೆ 1,500ಕ್ಕೂ ಹೆಚ್ಚು ತೆಂಗಿನ ಸಸಿ ವಿತರಿಸಲಾಯಿತು.