ಕೃಷಿ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಗುರುತಿಸಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸಲಹೆ

Distribution of cloth bags and plants Mandya
Published on

ಮಂಡ್ಯ: ಕೃಷಿ ವಿದ್ಯಾರ್ಥಿಗಳು ಬೇಸಾಯ ಕ್ಷೇತ್ರದಲ್ಲಿ ಉದ್ಭವಿಸಿರುವ ಸಮಸ್ಯೆ ಗುರುತಿಸಿ ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಲಹೆ ನೀಡಿದರು.

ತಾಲೂಕಿನ ಚಿಕ್ಕಬಳ್ಳಿ-ಆನಸೋಸಲು ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ ರಾಷ್ಟ್ರೀಯ ಸೇವಾ ಯೋಜನೆ ಘಟಕ, ವಿ.ಸಿ ಫಾರ್ಮ್ ಕೃಷಿ ಮಹಾವಿದ್ಯಾಲಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಡಿಆರ್‌ಪಿಬಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಬಟ್ಟೆ ಬ್ಯಾಗ್ ಹಾಗೂ ಗಿಡ ವಿತರಿಸಿ ಮಾತನಾಡಿದ ಅವರು, ನಮ್ಮ ದೇಶದ ಪ್ರಮುಖ ಬೆನ್ನೆಲುಬು ಎಂದರೆ ಅದು ಕೃಷಿ. ಜಿಲ್ಲೆಯಲ್ಲಿ ಕೃಷಿಯನ್ನು ನಂಬಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಇಂದು ಕೃಷಿ ಕ್ಷೇತ್ರದಲ್ಲಿ ಅದೆಷ್ಟು ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ, ಕೃಷಿ ಸಂಬಂಧಿಸಿದಂತೆ ಸಂಶೋಧನೆ ಮಾಡುವುದು, ವಿಶ್ವವಿದ್ಯಾಲಯಗಳಲ್ಲಿ ಕೃಷಿ ಕುರಿತಾಗಿ ಸಮರ್ಪಕವಾಗಿ ಕಲಿತಿರುವುದು ಕೇವಲ ಪುಸ್ತಕದಲ್ಲಿ ಮಾತ್ರ ಉಳಿಯ ಬಾರದು ಬದಲಾಗಿ ಅವುಗಳನ್ನು ಕಾರ್ಯರೂಪಕ್ಕೆ ತರುವುದರ ಮೂಲಕ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹಾರಿಸಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಬಹಳ ಮುಖ್ಯ. ಆರೋಗ್ಯ ಹಾಗೂ ಏಳಿಗೆ ಮೇಲೆ ಸ್ವಚ್ಛತೆ ಪ್ರಭಾವ ಬೀರುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆಯ ಮನೋಭಾವ ಬೆಳೆಸಿಕೊಳ್ಳಬೇಕು. ಎನ್‌ಎಸ್‌ಎಸ್ ಶಿಬಿರಗಳು ಸ್ವಚ್ಛತೆಗೆ ಹೆಚ್ಚಿನ ಮಹತ್ವ ಕೊಡುತ್ತದೆ. ಗ್ರಾಮ ಪಂಚಾಯಿತಿಯಲ್ಲಿ ಒಣ ಕಸವನ್ನು ಯಾರು ಹೆಚ್ಚು ಸಂಗ್ರಹಣೆ ಮಾಡಿ ನಿರ್ವಹಣೆ ಮಾಡುತ್ತಾರೋ ಅವರಿಗೆ ಚಾಲೆಂಜ್ ಫಂಡ್ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಸಾರ್ವಜನಿಕರು ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಗ್ರಾಮೀಣ ಭಾಗದ ಜನರು ಸ್ವಚ್ಛತೆಯ ಕುರಿತಾಗಿ ಹೆಚ್ಚಿನ ಗಮನ ಹರಿಸಿ. ಜನ್ಮದಿನ ಹಾಗೂ ಶುಭ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವ ಬದಲು ಗಿಡ ನೆಡುವ ಪ್ರೌವೃತ್ತಿಗಳನ್ನು ಬೆಳೆಸಿಕೊಳ್ಳಿ. ಇದರಿಂದ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡಬಹುದು ಎಂದು ಕಿವಿಮಾತು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಕೃಷ್ಣ, ಆರ್‌ಎಪಿಸಿಎಂಎಸ್ ನಿರ್ದೇಶಕ ಸಿ.ಕೆ.ಪಾಪಯ್ಯ, ದೇವರಾಜು, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಪ್ರವೀಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net