ಮೈಸೂರಿನಲ್ಲಿ ದೀಪಾವಳಿ ಪ್ರಯುಕ್ತ ಮಣ್ಣಿನ ದೀಪ ವಿತರಣೆ

Distribution of clay lamps on the occasion of Deepavali in Mysore
Published on

ಮೈಸೂರು: ನಗರದ ದೇವರಾಜ ಮಾರುಕಟ್ಟೆ ಮುಂಭಾಗದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಸ್ವದೇಶಿ ಸುರಕ್ಷಿತ ಅಭಿಯಾನದ ಭಾಗವಾಗಿ ಮಂಗಳವಾರ ಮಣ್ಣಿನ ದೀಪಗಳನ್ನು ವಿತರಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ, ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶದ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗುತ್ತದೆ. ಆಟಿಕೆಗಳು, ಪಟಾಕಿಗಳು, ಗೊಂಬೆಗಳು, ಪೆನ್, ಪೆನ್ಸಿಲ್, ಮೊಬೈಲ್ ಸೇರಿದಂತೆ ಎಲ್ಲ ವಲಯಗಳಲ್ಲೂ ಚೀನಾದ ಬ್ರಾಂಡ್‌ಗಳು ಮಾರುಕಟ್ಟೆ ಪ್ರವೇಶಿಸಿವೆ. ಇದರ ಪರಿಣಾಮವಾಗಿ ಚನ್ನಪಟ್ಟಣದ ಗೊಂಬೆ, ಇಳಕಲ್, ಮೊಳಕಾಲ್ಮುರು ರೇಷ್ಮೆ ಸೇರಿದಂತೆ ಸ್ವದೇಶಿ ಕುಶಲ ವಸ್ತುಗಳ ತಯಾರಿಕಾ ಘಟಕಗಳು ಮುಚ್ಚಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಕಾರಣಕ್ಕೆ ಈ ದೀಪಾವಳಿಯಲ್ಲಿ ಕುಂಬಾರರು ತಯಾರಿಸಿರುವ ಮಣ್ಣಿನ ದೀಪಗಳನ್ನು ಬಳಸಿ ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ ನೀಡೋಣ ಎಂದು ಕೋರಿದರು.

ಈ ಸಂದರ್ಭದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್. ರಾಜೇಶ್, ಚಾಮರಾಜ ಕ್ಷೇತ್ರದ ಬಿಜೆಪಿ ಸಂಚಾಲಕ ಸಚಿನ್ ನಾಯಕ್, ಮಹಾನ್ ಶ್ರೇಯಸ್, ದುರ್ಗಾ ಪ್ರಸಾದ್, ಶ್ರೀನಿವಾಸ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net