

ನಾಗಮಂಗಲ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ವಿವಿಧ ಬೆಳೆಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ನಷ್ಟ ಹೊಂದಿರುವ ರೈತರಿಗೆ ಸರ್ಕಾರ ಬೆಳೆ ಪರಿಹಾರ ನೀಡಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಹೊನ್ನಾವರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿ 50ಕ್ಕೂ ಹೆಚ್ಚು ಅರ್ಹ ಫಲಾನುಭವಿ ರೈತರಿಗೆ ಚಾಪ್‌ಕಟರ್ ಯಂತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಈ ಬಾರಿ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬಗೆಯ ಬೆಳೆ ಬೆಳೆಯಲಾಗಿದೆ. ಈ ಪೈಕಿ ಈಗಾಗಲೇ 50 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಕಟಾವು ಆಗಿದೆ. ಇನ್ನುಳಿದ 40 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಬೆಳೆ ಬೆಳೆದು ನಿಂತಿದೆ. ಪ್ರಕೃತಿ ವಿಕೋಪಕ್ಕೆ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾಳಾಗಿದೆ ಎಂದರು.
ಕೃಷಿ ಪದ್ಧತಿಯಲ್ಲಿ ಹಲವಾರು ಬದಲಾವಣೆಯಾಗಿದ್ದು, ಹವಾಮಾನಕ್ಕೆ ತಕ್ಕಂತೆ ಕೃಷಿಯನ್ನು ಬೆಳೆಯಬೇಕಾಗಿದೆ. ರೈತರ ಜಮೀನುಗಳಲ್ಲಿ ಕೃಷಿ ಕೆಲಸ ಮಾಡುವ ಕಾರ್ಮಿಕರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಹಲವಾರು ಯೋಜನೆಯನ್ನು ರೈತರಿಗೆ ನೀಡಲಾಗುತ್ತಿದೆ. ಆಧುನಿಕ ಕೃಷಿ ಪದ್ಧತಿಯಡಿ ವಿವಿಧ ರೀತಿಯ ಯಂತ್ರೋಪಕರಣ ನೀಡಲಾಗುತ್ತಿದೆ. ಕೃಷಿ ಹೊಂಡ ಸೇರಿದಂತೆ ರೈತರಿಗೆ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಡಲಾಗುತ್ತಿದೆ. ಆದ್ದರಿಂದ ವೈಜ್ಞಾನಿಕ ಕೃಷಿ ಪದ್ಧತಿ ಜತೆಗೆ ಸರ್ಕಾರದ ಎಲ್ಲ ಯೋಜನೆಗಳ ಲಾಭವನ್ನು ಪಡೆದು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕಿನಲ್ಲಿ ಹಲವಾರು ಯೋಜನೆಗಳು ಮತ್ತು ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಂಡಿದ್ದೇನೆ. ನಮ್ಮ ಸರ್ಕಾರವೂ ಕೂಡ 5 ಗ್ಯಾರಂಟಿಗಳ ಜತೆಗೆ ಕೃಷಿ ಭಾಗ್ಯ ಸೇರಿದಂತೆ ಸಾರ್ವಜನಿಕರು ಮತ್ತು ರೈತರಿಗೆ ಅನುಕೂಲವಾಗುವಂತಹ ಹತ್ತಾರು ಯೋಜನೆ ಜಾರಿಗೆ ತಂದಿದೆ. ಆದರೆ, ಕೆಲವರು ಇದೇನು ಅವರಪ್ಪನ ಮನೆಯಿಂದ ತಂದುಕೊಟ್ಟಿದ್ದಾರೆಯೇ ಎಂದು ಕುಚೇಷ್ಟೆ ಮಾಡುತ್ತಾರೆ. ಯಾರೂ ಕೂಡ ಅವರಪ್ಪನ ಮನೆಯಿಂದ ತಂದುಕೊಡಲ್ಲ. ಆದರೆ, ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುಂತಹ ಕೆಲಸಗಳನ್ನು ಮಾಡಲು ಇಚ್ಚಾಶಕ್ತಿ ಬೇಕಲ್ಲವೆ?. ಆ ಇಚ್ಚಾಶಕ್ತಿ ಟೀಕೆ ಮಾಡುವವರಿಗೆ ಏಕಿರಬಾರದು ಎಂದು ಪ್ರಶ್ನಿಸಿದರು.
ಕಳೆದ ಐದು ವರ್ಷ ಅಧಿಕಾರ ನಡೆಸಿದ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದ ಸಾಧನೆ ಏನು?. ರೈತರಿಗೆ ಅನುಕೂಲವಾಗುವ ಯಾವುದಾದರೂ ಒಂದೇ ಒಂದು ಯೋಜನೆ ಜಾರಿ ಮಾಡಲಿಲ್ಲ. ಕೇವಲ ಅಧಿಕಾರ ನಡೆಸಿ ಮಜಾ ಮಾಡಿಕೊಂಡು ಹೋದರು. ನಮ್ಮ ಸರ್ಕಾರ ಬಂದ ಮೇಲೆ ಗ್ಯಾರಂಟಿ ಯೋಜನೆಗಳ ಜತೆಗೆ ಹಲವಾರು ಜನಪರ ಕೆಲಸ ಜಾರಿಗೊಳಿಸಿದ್ದೇವೆ. ಅವಕಾಶ ಸಿಕ್ಕಾಗ ಪಕ್ಷಬೇಧ ಮರೆತು ಕೆಲಸ ಮಾಡಬೇಕು. 2013ರಲ್ಲಿ ನಾನು ಶಾಸಕನಾಗಿದ್ದಾಗ ಜಾರಿಗೆ ತಂದಿದ್ದ ತಾಲೂಕಿನ ನಾಗಮಂಗಲ-ಶ್ರವಣಬೆಳಗೂಳ ರಸ್ತೆ ಅಭಿವೃದ್ಧಿ ಕೆಲಸವನ್ನು ಪೂರ್ಣಗೊಳಿಸಲು 2023ರಲ್ಲಿ ಮತ್ತೆ ಶಾಸಕನಾಗಿ ಬರಬೇಕಾಯಿತು ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಟೀಕಿಸಿದರು.
ರೈತರ ಅಭಿವೃದ್ಧಿಗಾಗಿ ರಿಯಾಯಿತಿ ದರದಲ್ಲಿ ಯಂತ್ರೋಪಕರಣಗಳನ್ನು ನಮ್ಮ ಸರ್ಕಾರ ನೀಡುತ್ತಿದೆ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಬ್ಬು ಕಟಾವು ಮಾಡುವ ಯಂತ್ರವನ್ನು ರೈತರಿಗೆ ಶೇ.40ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಮಂಡ್ಯದ ರೈತರೊಬ್ಬರಿಗೆ ಒಂದು ಕೋಟಿ ರೂ ಬೆಲೆ ಬಾಳುವ ಯಂತ್ರಕ್ಕೆ 40 ಲಕ್ಷ ರೂ ರಿಯಾಯಿತಿ ನೀಡಲಾಗಿದೆ. ಕೃಷಿಯಲ್ಲಿ ಸಮಗ್ರ ಬದಲಾವಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಬಾರಿ ಮೂರು ಸಾವಿರ ಕೋಟಿ ರೂ.ನಷ್ಟು ವಿಮೆ ಹಣವನ್ನು ವಿವಿಧ ಯೋಜನೆಯಡಿ ರೈತರಿಗೆ ಪಾವತಿ ಮಾಡಿದ್ದೇವೆ. ಇದು ರಾಜ್ಯದ ಇತಿಹಾಸದಲ್ಲೇ ದೊಡ್ಡ ಮೊತ್ತ. ಸಹಕಾರ ಬ್ಯಾಂಕ್‌ಗಳಲ್ಲಿ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಸಚಿವರು, ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿದೆ. ಇದರಿಂದ ಉತ್ತಮ ಬೆಳೆಯಾಗುವ ವಿಶ್ವಾಸವಿದೆ ಎಂದರು.
ಮಾಜಿ ಎಂಎಲ್‌ಸಿ ಎನ್.ಅಪ್ಪಾಜಿಗೌಡ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿದೇಶಕ ಡಾ.ಭಾನುಪ್ರಕಾಶ್, ಮನ್‌ಮುಲ್ ಮಾಜಿ ನಿರ್ದೇಶಕ ಲಕ್ಷ್ಮೀ ನಾರಾಯಣ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಹೊನ್ನಾವರ ಗ್ರಾಪಂ ಅಧ್ಯಕ್ಷ ಹರೀಶ್, ಮುಖಂಡರಾದ ಬೋರೇಗೌಡ, ಆರ್.ಕೃಷ್ಣೇಗೌಡ, ಕೃಷ್ಣೇಗೌಡ ಇತರರಿದ್ದರು.
ಇದೇ ವೇಳೆ 70 ಲಕ್ಷ ರೂ ವೆಚ್ಚದಲ್ಲಿ 50ಕ್ಕೂ ಹೆಚ್ಚು ರೈತ ಫಲಾನುಭವಿಗಳಿಗೆ ಜಾನುವಾರುಗಳ ಮೇವು ಕತ್ತರಿಸುವ ಚಾರ್ ಕಟರ್ ವಿತರಿಸಲಾಯಿತು. ಬಳಿಕ ಅಂಚೆಭೂವನಹಳ್ಳಿ, ಬ್ರಹ್ಮದೇವರಹಳ್ಳಿಯಲ್ಲೂ ಕೂಡ ರೈತರಿಗೆ ಚಾಪ್‌ಕಟರ್ ನೀಡಲಾಯಿತು.