

ಬಳ್ಳಾರಿ : ಹೊಸಪೇಟೆಯ ವಡ್ಡರಹಳ್ಳಿ ಬ್ರಿಡ್ಜ್ ಬಳಿ ಕಳೆದ ಜೂ.30ರಂದು ನಡೆದ ರಸ್ತೆ ಅಪಘಾತದಲ್ಲಿ ಮೃತರಾದ ಬಳ್ಳಾರಿಯ ಕೌಲ್ ಬಜಾರ್ ಮತ್ತು ನಗರ ವ್ಯಾಪ್ತಿಯ ಮೃತರ ಕುಟುಂಬಗಳಿಗೆ ಗುರುವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಪರಿಹಾರದ ಚೆಕ್ ವಿತರಣೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಚೆಕ್ ವಿತರಿಸಿದರು. ಅಪಘಾತದಲ್ಲಿ ಒಟ್ಟು 9 ಜನ ಮೃತರಾಗಿದ್ದು, ಮೃತರ ಪೈಕಿ ಕೌಲ್‌ಬಜಾರ್‌ನ ನಿವಾಸಿಗಳಾದ ಏಳು ಜನರು ಮೃತರಾಗಿದ್ದರು. ಏಳು ಜನರ ಕುಟುಂಬಕ್ಕೆ ಚೆಕ್ ವಿತರಣೆ ಮಾಡಲಾಗಿದ್ದು, ಇನ್ನುಳಿದ ಇಬ್ಬರ ಕುಟುಂಬಗಳಿಗೆ ಶೀಘ್ರದಲ್ಲೇ ಚೆಕ್ ವಿತರಿಸಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರಾ, ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಜಾನಕಿ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯ್ಡು, ಪಾಲಿಕೆ ಸದಸ್ಯೆ ಸುಕ್ಕುಂ, ಕಾಂಗ್ರೆಸ್ ಮುಖಂಡ ಬಿ.ವೆಂಕಟೇಶ್ ಪ್ರಸಾದ್, ಅಯಾಜ್, ರಿಯಾಜ್, ಕೆ.ಹೊನ್ನಪ್ಪ, ನಾಗಲಕೆರೆ ಗೋವಿಂದ, ಗುಜರಿ ಬಸವರಾಜ್, ಮುದ್ದಿ ಮಲ್ಲಯ್ಯ, ಜರಾಲ್ಡ್ ಜೆರ್ರಿ, ಹಗರಿ ಗೋವಿಂದ ಸೇರಿದಂತೆ ಹಲವರು ಹಾಜರಿದ್ದರು.